ಶೀಘ್ರದಲ್ಲೇ ಸಯೀದ್, ನಿಕಟವರ್ತಿಗಳ ಬಂಧನ: ಪೊಲೀಸ್

Update: 2019-07-04 18:20 GMT

ಲಾಹೋರ್, ಜು. 4: ಮುಂಬೈ ಭಯೋತ್ಪಾದಕ ದಾಳಿ ಸೂತ್ರಧಾರಿ ಹಾಗೂ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಬದ ಮುಖ್ಯಸ್ಥ ಹಫೀಝ್ ಸಯೀದ್ ಮತ್ತು ಅವನ 12 ಮಂದಿ ನಿಕಟವರ್ತಿಗಳನ್ನು ‘ಶೀಘ್ರದಲ್ಲೇ’ ಬಂಧಿಸಲಾಗುವುದು ಎಂದು ಪಾಕಿಸ್ತಾನದ ಪೊಲೀಸರು ಗುರುವಾರ ಹೇಳಿದ್ದಾರೆ.

ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಕಪ್ಪುಹಣ ಬಿಳುಪು ಮಾಡಿರುವ ಆರೋಪಗಳನ್ನು ಈ ಉಗ್ರರ ವಿರುದ್ಧ ಪಾಕಿಸ್ತಾನದ ಅಧಿಕಾರಿಗಳು ಹೊರಿಸಿದ ಒಂದು ದಿನದ ಬಳಿಕ ಪೊಲೀಸರು ಈ ಹೇಳಿಕೆ ನೀಡಿದ್ದಾರೆ.

ಪಂಜಾಬ್ ರಾಜ್ಯದ ವಿವಿಧ ನಗರಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಹಣಕಾಸು ಪೂರೈಸಿದ ಆರೋಪದಲ್ಲಿ ಪಂಜಾಬ್ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ಇಲಾಖೆಯು ಬುಧವಾರ ಈ 13 ಮಂದಿಯ ವಿರುದ್ಧ 23 ಎಫ್‌ಐಆರ್‌ಗಳನ್ನು ದಾಖಲಿಸಿದೆ.

‘‘ಭಯೋತ್ಪಾದನೆ ನಿಗ್ರಹ ಇಲಾಖೆಯು ಜಮಾಅತುದಅವಾ (ಜೆಯುಡಿ) ಮತ್ತು ಇತರ ನಿಷೇಧಿತ ಸಂಘಟನೆಗಳ 13 ಮಂದಿಯ ವಿರುದ್ಧ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿರುವ ಆರೋಪಗಳನ್ನು ಹೊರಿಸಿದೆ. ಎಫ್‌ಐಆರ್‌ಗಳು ದಾಖಲಾಗಿರುವುದರಿಂದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು’’ ಎಂದು ಪಂಜಾಬ್ ಪೊಲೀಸ್ ವಕ್ತಾರ ನಿಯಾಬ್ ಹೈದರ್ ನಖ್ವಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

ಹಫೀಝ್ ಸಯೀದ್‌ನನ್ನು ಮುಟ್ಟಲು ಪಾಕಿಸ್ತಾನದ ಪಂಜಾಬ್ ಪೊಲೀಸರು ‘ಅತ್ಯುನ್ನತ ಸ್ತರ’ದಿಂದ ಅನುಮತಿಗಾಗಿ ಕಾಯುತ್ತಿದ್ದಾರೆ ಎಂಬುದಾಗಿ ಇಮ್ರಾನ್ ಖಾನ್ ಸರಕಾರದ ಮೂಲವೊಂದು ಪಿಟಿಐಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News