ಮಂಗಳೂರು: ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಆಮಿಷವೊಡ್ಡುವ ಜಾಲ ಪತ್ತೆ

Update: 2019-07-05 08:53 GMT

ಮಂಗಳೂರು: ಭಾರತೀ ಫೈನಾನ್ಸ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ ಎಂದು ಕರೆ ಮಾಡಿ ಹಣ ಪಡೆದು ವಂಚನೆ ಮಾಡಿದ ಪ್ರಕರಣವನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ಹೊಸದಿಲ್ಲಿಯ ಪೊಲೀಸರ ಸಹಕಾರದಿಂದ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ಉತ್ತರ ಪ್ರದೇಶದ ತಾಂಡ ನಿವಾಸಿ, ಹೊಸದಿಲ್ಲಿಯ ಸೌತ್‌ವೆಸ್ಟ್‌ನ ಜಗದಂಬಾ ವಿಹಾರ್ ಬಳಿ ವಾಸವಿದ್ದ ಯೂಸುಫ್ ಖಾನ್ (29) ಬಂಧಿತ ಆರೋಪಿ.

ಈತನ ಸಹಚರರಾದ ನೌಷಾದ್ ಮತ್ತು ಪ್ರಭಾಕರ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಪ್ರಕರಣದ ವಿವರ: ಭಾರತೀ ಫೈನಾನ್ಸ್‌ನಿಂದ ಕರೆ ಮಾಡುವುದಾಗಿ ಹೇಳಿ ನೇಹಾ ಎಂದು ಪರಿಚಯಿಸಿಕೊಂಡ ಮಹಿಳೆ ಎ.8ರಂದು ಕರೆ ಮಾಡಿದ್ದಳು. 2 ಲಕ್ಷ ರೂ. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ತಿಳಿಸಿದ್ದಳು. ನಿಜವೆಂದು ನಂಬಿ ಆಕೆ ತಿಳಿಸಿದಂತೆ ಸಾಲದ ಸೆಕ್ಯೂರಿಟಿ ಚಾರ್ಜ್, ಇನ್ಸೂರೆನ್ಸ್ ಇತ್ಯಾದಿ ಒಟ್ಟು 1.70ಲಕ್ಷ ರೂ. ಅವರು ತಿಳಿಸಿದ ವಿವಿಧ ಖಾತೆಗಳಿಗೆ ಜಮಾ ಮಾಡಿ ಮೋಸ ಹೋಗಿರುವುದಾಗಿ ಪಂಜಿಮೊಗರಿನ ವಿವೇಕ ನಗರದ ನಿವಾಶಿ ಕಾರ್ತಿಕ್ ಪೂಜಾರಿ (24) ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸೈಬರ್ ಕ್ರೈಂ ಪೊಲೀಸರು ವಂಚನೆ ಮಾಡಿದ ಮೊಬೈಲ್ ನಂಬರ್ ಗಳ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿ ಹೊಸದಿಲ್ಲಿಯ ಜನಕಪುರಿ ಪರಿಸರದಲ್ಲಿ ಹಾಗೂ ಇತರ ಕಡೆಗಳಲ್ಲಿ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದರು. ಹೊಸದಿಲ್ಲಿಯ ಪೊಲೀಸರ ಸಹಕಾರ ಪಡೆದು ಆರೋಪಿಗಳನ್ನು ಪತ್ತೆ ಮಾಡಲಾಗಿದೆ.

31 ಮೊಬೈಲ್, 2 ಲ್ಯಾಪ್‌ಟಾಪ್ ವಶ

ಆರೋಪಿಯನ್ನು ಪತ್ತೆ ಮಾಡಿ ಆತನ ಕಚೇರಿಗೆ ಧಾಳಿ ಮಾಡಿದಾಗ ಅಲ್ಲಿ ವಂಚನೆ ಮಾಡಲು ಬಳಸುತ್ತಿದ್ದ 31 ಮೊಬೈಲ್ ಫೋನ್, 2 ಲ್ಯಾಪ್‌ಟಾಪ್, ಸಾಲದ ಬಗ್ಗೆ ಮಾಹಿತಿ ಬರೆದಿರುವ 10 ಪುಸ್ತಕಗಳು, 70 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಮಾತ್ರವದಲ್ಲದೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳ ಸಾರ್ವಜನಿಕರಿಗೆ ವಂಚನೆ ನಡೆಸಿರುವುದು ಗಮನಕ್ಕೆ ಬಂದಿದೆ ಎಂದು ಆಯುಕ್ತರು ತಿಳಿಸಿದರು.

ಆರೋಪಿ ಗ್ರಾಹಕರಿಗೆ ಹಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಏಜೆಂಟ್ ಆಗಿ ವ್ಯವಹಾರ ಮಾಡಿಕೊಂಡಿದ್ದ. ಈತ ನಕಲಿಯಾಗಿ ಭಾರತೀ ಫೈನಾನ್ಸ್ ಲಿಮಿಟೆಡ್‌ನ ಹೆಸರಿನಲ್ಲಿ ವೆಬ್‌ಸೈಟ್ ಮಾಡಿದ್ದ. ಈ ವೆಬ್‌ಸೈಟ್ ಮೂಲಕ ಈತನನ್ನು ಸಂಪರ್ಕಿಸುವ ಗ್ರಾಹಕರಿಗೆ ಈ ಫೈನಾನ್ಸ್‌ನಿಂದ ಶೇ.5 ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ ಎಂದು ನಂಬಿಸುತ್ತಿದ್ದ. ಅವರಿಂದ ಆಧಾರ್ ಕಾರ್ಡ್,ಪಾನ್ ಕಾರ್ಡ್, ಗ್ರಾಹಕರ ಭಾವಚಿತ್ರ, ಆದಾಯ ಪ್ರಮಾಣಪತ್ರ, ವೇತನ ಪ್ರಮಾಣಪತ್ರ, ಬ್ಯಾಂಕ್ ಖಾತೆ ವಿವರಗಳನ್ನು ವಾಟ್ಸಪ್, ಇಮೇಲ್ ಮೂಲಕ ಪಡೆದು ನಂತರ ದಾಖಲೆ ನೀಡಿದ ಗ್ರಾಹಕರಿಗೆ ಸಂಸ್ಥೆಯಿಂದ ವೆರಿಫಿಕೇಶನ್ ಕರೆ ಮಾಡುತ್ತಿದ್ದ. ಸಾಲ ಮಂಜೂರಾತಿ ಪ್ರಮಾಣಪತ್ರವನ್ನು ಇಮೆಲ್ ಮೂಲಕ ಕಳುಹಿಸಿ ಗ್ರಾಹಕರನ್ನು ನಂಬಿಸಿ ಅವರಿಗೆ ಈ ಸಾಲವನ್ನು ಸಂದಾಯ ಮಾಡಬೇಕಾದರೆ ಸೆಕ್ಯೂರಿಟಿ ಚಾರ್ಜ್, ಸರ್ವಿಸ್ ಚಾರ್ಜ್, ಇನ್ಸೂರೆನ್ಸ್ ಚಾರ್ಜ್, ಡಿಡಿ ಚಾರ್ಜ್ ಮೊದಲಾದ ಕಾರಣ ಹೇಳಿ ಅವರಿಂದ ದೊಡ್ಡ ಮೊತ್ತದ ಹಣವನ್ನು ಆರೋಪಿಯ ಖಾತೆಗೆ ಜಮಾ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಎಂದು ಸಂದೀಪ್ ಪಾಟೀಲ್ ವಿವರಿಸಿದರು.

ಸೈಬರ್ ಕ್ರೈಂ ಪಿಎಸ್‌ಐ ಚಂದ್ರಶೇಖರಯ್ಯ, ಸಿಸಿಆರ್‌ಬಿ ಘಟಕದ ಪಿಎಸ್‌ಐ ಶ್ಯಾಮ್ ಸುಂದರ್, ಸಿಬ್ಬಂದಿ ರಾಜೇಂದ್ರ, ಗಣಕಯಂತ್ರ ವಿಭಾಗದ ಮನೋಜ್ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣಾ ಎಎಸ್‌ಐ ಓಂದಾಸ್, ಹೆಚ್.ಸಿ.ಗಳಾದ ದಿನೇಶ್ ಬೇಕಲ್, ಕುಮಾರ್, ಮಾಯಾ ಪ್ರಭು, ಕಾನ್‌ಸ್ಟೇಬಲ್‌ಗಳಾದ ವಿಜಯ್ ಶೆಟ್ಟಿ, ಗೃಹರಕ್ಷಕ ವಿದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ತಂಡಕ್ಕೆ ಸೂಕ್ತ ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡುವುದಾಗಿ ಆಯುಕ್ತರು ತಿಳಿಸಿದರು.

400 ಮಂದಿಗೆ ಕರೆ ಮಾಡಿದ್ದರು

ಹೊಸದಿಲ್ಲಿಯಲ್ಲಿದ್ದುಕೊಂಡು ದೇಶದ ಉದ್ದಗಲಕ್ಕೂ ಆರೋಪಿಗಳು ವಂಚನಾ ಜಾಲ ಬೀಸಿದ್ದರು. ಕಳೆ 6 ತಿಂಗಳಿನಿಂದ ಸುಮಾರು 400ಕ್ಕಿಂತಲೂ ಅಧಿಕ ಮಂದಿಗೆ ಕರೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಏರ್‌ಲೈನ್ ಕಂಪೆನಿಯ ನಕಲಿ ವೆಬ್‌ಸೈಟ್ ಮಾಡಿಕೊಂಡು ಹಣ ವಂಚನೆ ಮಾಡುತ್ತಿರುವ ಬಗ್ಗೆ 2 ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News