ಭಟ್ಕಳ: ಗುಂಪು ಹತ್ಯೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ
ಭಟ್ಕಳ: ‘ಗುಂಪುಹತ್ಯೆ ವಿರುದ್ಧ ದ್ವನಿ’ ಎಂಬ ಘೋಷಣೆಯೊಂದಿಗೆ ಇಲ್ಲಿನ ಮಜ್ಲಿಸೆ ಇಸ್ಲಾಹ-ವ-ತಂಝೀಮ್ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ಶುಕ್ರವಾರ ಸಂಜೆ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಈದ್ಗಾ ಮೈದಾನದಿಂದ ಹಳೆ ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡ ಪ್ರಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಚಿನ್ನದಪಳ್ಳಿ (ಜಾಮಿಯಾ ಮಸೀದಿ) ಇಮಾಮ್ ಮತ್ತು ಖತೀಬ್ ಮೌಲಾನ ಅಬ್ದುಲ್ ಅಲೀಂ ನದ್ವಿ, ದೇಶದ ರಕ್ಷಣೆಯ ಪಣತೊಟ್ಟಿರುವ ಪೊಲೀಸ್ ಇಲಾಖೆ, ಹಾಗೂ ಸರ್ಕಾರ ಯಾವುದೇ ತಾರತಮ್ಯ ಮಾಡದೇ ದೇಶ ರಕ್ಷಣೆಯ ಕರ್ತವ್ಯವನ್ನು ನಿರ್ವಹಿಸಿದರೆ ದೇಶದಲ್ಲಿ ಯಾವತ್ತೂ ಕೂಡ ಗಲಭೆ, ಸಂಘರ್ಷಗಳು ಉಂಟಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಉಡುಪಿಯ ಇದ್ರೀಸ್ ಹೂಡೆ ಮಾತನಾಡಿ, ಒಂದು ಸಿದ್ಧಾಂತವನ್ನು ಬಲಂತವಾಗಿ ಜನರ ಮೇಲೆ ಹೇರುವ ಪ್ರಯತ್ನಗಳು ನಡೆಯುತ್ತಿದ್ದು ಸಂಸ್ಕೃತಿಯ ಹೆಸರಿನಲ್ಲಿ ಅಮಾಯಕ ಮೇಲೆ ಹತ್ಯೆ ನಡೆಸುತ್ತಿದ್ದಾರೆ, ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಗೊಂಡ ಸಂಸದರು ದೇಶದ ಸಂಸತ್ತಿನಲ್ಲಿ ಬೀದಿಬದಿಯ ಪುಂಡರಂತೆ ವರ್ತಿಸುತ್ತಿದ್ದು ಪ್ರಮಾಣ ವಚನ ಬೋಧನಾ ಸಮಾರಂಭದಲ್ಲಿ ಏನಾಯಿತು ಎನ್ನುವುದನ್ನು ದೇಶ ಕಂಡಿದೆ. ಇಂತಹ ಮನಸ್ಥಿತಿಯ ಜನರು ದೇಶವನ್ನು ಹೇಗೆ ಪ್ರತಿನಿಧಿಸಬಲ್ಲರು ಎಂದ ಅವರು ದೇಶ ಸಂವಿಧಾನ ಬದಲಾಸುತ್ತೇನೆ ಎಂದು ಹೇಳಿದ ಜನಪ್ರತಿನಿಧಿಯೊಬ್ಬ ಅದೇ ಸಂವಿಧಾನ ಮೇಲೆ ಪ್ರಮಾಣ ಮಾಡಿ ಅಧಿಕಾರ ಪಡೆಯುತ್ತಾನೆ. ಇದಕ್ಕಿಂತಲೂ ದೊಡ್ಡ ಅಪಹಾಸ್ಯ ಯಾವುದಿರಬಹುದು ಎಂದು ಪ್ರಶ್ನಿಸಿದರು.
ದೇಶ ಎಂದರೆ ಒಂದು, ಗಡಿ, ಭಾಷೆಯ ಹೆಸರಲ್ಲ. ಇಲ್ಲಿರುವ ಎಲ್ಲ ಜನಾಂಗದವರನ್ನು ಸೇರಿಸಿದರೆ ಅದು ದೇಶವಾಗುತ್ತದೆ. ದೇಶ ಪ್ರೇಮವನ್ನು ಸಾಬೀತು ಮಾಡಲು ಯಾರದ್ದೇ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದರು.
ಸಮಾಜಿಕ ಕಾರ್ಯಕರ್ತ ಡಾ. ಹನೀಫ್ ಶಬಾಬ್ ಮಾತನಾಡಿ, ದೇಶದಲ್ಲಿ ಅಮಾಯಕರ, ದುರ್ಬಲರ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಗುಂಪು ಹತ್ಯೆಗಳು ದೇಶ ಅಪಾಯದಲ್ಲಿದೆ ಎನ್ನುವುದನ್ನು ತೋರ್ಪಡಿಸುತ್ತದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಧಿಕ್ಕರಿಸಿ ಕಾನೂನು ಕೈಗೆತ್ತಿಕೊಳ್ಳುವುದರ ಮೂಲಕ ದಲಿತ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಿರುವುದು ಮತ್ತು ಅವರನ್ನು ಕಂಬಗಳಿಗೆ ಕಟ್ಟಿ ಗುಂಪು ಹತ್ಯೆ ಮಾಡುತ್ತಿರುವ ಪ್ರವೃತ್ತಿಯನ್ನು ಖಂಡಿಸುತ್ತಿದ್ದು, ಈ ಪ್ರತಿಭಟನೆ ಯಾವುದೇ ಸಮುದಾಯದ ವಿರುದ್ಧವಾಗಿರದೆ, ಅಕ್ರಮಿಗಳ, ದಬ್ಬಾಳಿಕೆಗಾರರ ವಿರುದ್ಧವಾಗಿದೆ. ದೌರ್ಜನ್ಯಕ್ಕೊಳಗಾದ ಸಮುದಾಯಕ್ಕೆ ಆತ್ಮ ಸ್ಥೈರ್ಯವನ್ನು ತುಂಬುವು ದಾಗಿದೆ ಎಂದರು.
ನ್ಯಾಯಾವಾದಿ ಇಮ್ರಾನ್ ಲಂಕಾ ಪ್ರಸ್ತಾವಿಕವಾಗಿ ಮಾತನಾಡಿದರು.
ತಂಝೀಮ್ ಪ್ರಧಾನ ಕಾರ್ಯದರ್ಶಿ ಎಂ.ಜೆ. ಅಬ್ದುಲ್ ರಕೀಖ್ ಮನವಿ ಪತ್ರವನ್ನು ಓದಿದರು. ಸಂವಿಧಾನ ಪ್ರಸ್ತಾಪಿಸಿದ ಮೌಲ್ಯಗಳನ್ನು ಮರು ಸ್ಥಾಪಿಸುವಂತೆ ಮತ್ತು ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವುದು ಸೇರಿದಂತೆ ಅಲ್ಪಸಂಖ್ಯಾತರು, ದುರ್ಬಲರು ವಿಶೇಷವಾಗಿ ಮುಸ್ಲಿಮರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಮತ್ತು ಜನರು ಕಾನೂನನ್ನು ಕೈಗೆತ್ತಿಕೊಳ್ಳದಂತೆ ತಡೆಯಬೇಕು, ದೇಶದ ಎಲ್ಲ ಸಮುದಾಯಗಳಿಗೆ ರಕ್ಷಣೆ ಒದಗಿಸಬೇಕು, ಧರ್ಮಧಾರಿತ ತಾರತಮ್ಯಕ್ಕೆ ಕೂಡಲೇ ಕಡಿವಾಣ ಹಾಕಬೇಕು, ಈ ಕುರಿತಂತೆ ಕೇಂದ್ರ ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ ಒಂದು ಹೊಸ ಕಾನೂನು ರೂಪಿಸುವುದರ ಮೂಲಕ ದೇಶದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯ, ಗುಂಪುಹತ್ಯೆ, ಗಲಭೆಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದರು.
ಪ್ರತಿಭಟನಾ ಮೆರವಣೆಗೆಯ ನೇತೃತ್ವವನ್ನು ತಂಝಿಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಝ್, ಮೌಲಾನ ಅಬ್ದುಲ್ ಖಾಸ್ಮಿ, ಇನಾಯತುಲ್ಲಾ ಶಾಬಂದ್ರಿ, ಯೂನೂಸ್ ಕಾಝಿಯಾ, ಮೌಲಾನ ಅಝೀಝುರ್ರಹ್ಮಾನ್ ನದ್ವಿ, ಮುಹಿದ್ದಿನ್ ಅಲ್ತಾಫ್ ಖರೂರಿ, ಮೌಲಾನ ಯಾಸಿರ್ ನದ್ವಿ ಮತ್ತಿತರರು ವಹಿಸಿಕೊಂಡಿದ್ದರು.
ಸಹಾಯಕ ಆಯುಕ್ತ ಸಾಜಿದ್ ಮುಲ್ಲ ಅವರ ಮೂಲಕ ರಾಷ್ಟ್ರಪತಿಗೆ ಮನವಿಯನ್ನು ಸಲ್ಲಿಸಲಾಯಿತು.