×
Ad

ಮಠಾಧಿಪತಿಗಳು, ಹೋರಾಟಗಾರರೊಂದಿಗೆ ಚರ್ಚೆಗೆ ಸಿದ್ಧ: ಪೇಜಾವರಶ್ರೀ

Update: 2019-07-05 21:18 IST

ಉಡುಪಿ, ಜು. 5: ವೀರಶೈವ-ಲಿಂಗಾಯತ ಧರ್ಮವು ಹಿಂದೂ ಧರ್ಮದಿಂದ ಪ್ರತ್ಯೇಕವಲ್ಲ, ಅದು ಹಿಂದೂ ಧರ್ಮದ ಒಂದು ಭಾಗ ಎಂದು ತಾನು ಹರಿಹರದಲ್ಲಿ ನೀಡಿದ ಹೇಳಿಕೆಯ ಕುರಿತಂತೆ ರಾಜ್ಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಈ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಈ ಬಗ್ಗೆ ಲಿಂಗಾಯತ-ವೀರಶೈವ ಮಠಾಧಿಪತಿಗಳು ಹಾಗೂ ಲಿಂಗಾಯಿತ ಧರ್ಮ ಹೋರಾಟಗಾರರೊಂದಿಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಹೇಳಿದ್ದಾರೆ.

ರಥಬೀದಿಯ ಪೇಜಾವರ ಮಠದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೇಜಾವರಶ್ರೀಗಳು, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಕುರಿತು ಎರಡೂ ಕಡೆಯ ಮಠಾಧಿಪತಿಗಳು ಹಾಗೂ ಧರ್ಮ ಹೋರಾಟಗಾರರೊಂದಿಗೆ ‘ಸ್ನೇಹ ಸಂವಾದ’ ನಡೆಸಲು ನಾನು ಸಿದ್ಧನಿದ್ದೇನೆ ಎಂದರು.

ಜು.28ರ ಒಳಗೆ ದಿನಾಂಕವನ್ನು ನಿಗದಿ ಪಡಿಸಿ ಎಲ್ಲಾ ಮಠಾಧಿಪತಿಗಳು, ರಾಜಕಾರಣಿಗಳ ಜೊತೆಗೆ ಸ್ನೇಹ ಸಂವಾದಕ್ಕೆ ಸಿದ್ಧನಿದ್ದೇನೆ. ಶಾಂತ ವಾತಾವರಣ ದಲ್ಲಿ ಮುಕ್ತ ಮನಸ್ಸಿನಿಂದ ಚರ್ಚೆ ಮಾಡೋಣ. ಈ ಪತ್ರಿಕಾಗೋಷ್ಠಿಯ ಮೂಲಕ ನಾನು ಎಲ್ಲರಿಗೂ ಆಹ್ವಾನ ನೀಡುತಿದ್ದೇನೆ. ಚರ್ಚೆಗೆ ಒಪ್ಪಿದರೆ ನಾನು ವೇದಿಕೆ ಸಿದ್ಧ ಮಾಡುತ್ತೇನೆ. ನೀವು ಒಪ್ಪಿದಲ್ಲಿ ಚರ್ಚೆಗೆ ಬರಲು ಸಿದ್ಧನಿದ್ದೇನೆ. ಸಂವಾದ ಬೆಂಗಳೂರಿನ ನಮ್ಮ ಆಶ್ರಮವಾದ ಪೂರ್ಣಪ್ರಜ್ಞ ವಿದ್ಯಾಪೀಠ ಹಾಗೂ ಬೇರೆ ಕಡೆಯಲ್ಲಿ ನಡೆಯಲಿ ಎಂದು ಆಹ್ವಾನ ನೀಡಿದ ಸ್ವಾಮೀಜಿ, ಜು.28ರ ನಂತರವಾದರೆ ನಾವು ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳುವು ದರಿಂದ ಅಲ್ಲಿಯೇ ಸಂವಾದ ಏರ್ಪಡಿಸಬಹುದು ಎಂದರು.

ಆದರೆ ಸಂವಾದದ ವೇಳೆ ಆಕ್ರೋಶ, ವಿರುದ್ಧ ಘೋಷಣೆಗೆ ಅವಕಾಶ ಇರಬಾರದು ಎಂದು ಹೇಳಿದ ಪೇಜಾವರಶ್ರೀಗಳು, ಲಿಂಗಾಯತರು, ವೀರಶೈವರು ಬೇರೆ ಬೇರೆಯಲ್ಲ. ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರು. ಅಣ್ಣ-ತಮ್ಮಂದಿರನ್ನು ಒಟ್ಟಾಗಿ ಕೊಂಡೊಯ್ಯುವುದು ತಪ್ಪೇ ಎಂದು ಪ್ರಶ್ನಿಸಿದರು. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ, ಎರಡೂ ಪಕ್ಷಗಳ ಹಿತದೃಷ್ಟಿಯಿಂದ ಹೇಳುತಿದ್ದೇನೆ ಎಂದರು.

ವೀರಶೈವ-ಲಿಂಗಾಯತರು ಒಟ್ಟಾದರೆ ಹೆಚ್ಚು ಶಕ್ತಿ ಬರುತ್ತದೆ. ಹಿಂದೂ ಧರ್ಮದ ಹಿತದೃಷ್ಟಿಯಿಂದ, ಅದನ್ನು ಬಲಿಷ್ಠಗೊಳಿಸಲು ಒಂದಾಗಬೇಕು. ಲಿಂಗಾಯತ ಹಿಂದೂ ಧರ್ಮ ಬೇರೆ ಅಲ್ಲ. ಎಲ್ಲರೂ ತಮ್ಮದು ಬೇರೆ ಧರ್ಮ ಎಂದರೆ ಹಿಂದೂಗಳು ಯಾರು? ಶಿವಾರಾಧನೆಯನ್ನು ಒಪ್ಪುವವರು, ಲಿಂಗಪೂಜೆ ಮಾಡುವವರೆಲ್ಲರೂ ಹಿಂದೂಗಳೇ ಆಗಿದ್ದಾರೆ ಎಂದರು.

ಶಿವನೇ ಪರದೈವ ಎಂದು ಒಪ್ಪಿದ ಮೇಲೆ ಲಿಂಗಾಯಿತರು ಹಿಂದೂಗಳಲ್ಲ ಎಂಬುದು ಎಷ್ಟರ ಮಟ್ಟಿಗೆ ಸರಿ. ಕೆಲವು ಲಿಂಗಾಯಿತ ಸ್ವಾಮೀಜಿಗಳು ನಮ್ಮ ಶಿವ ಬೇರೆ ನಿಮ್ಮ ಶಿವ ಬೇರೆ, ನಮ್ಮ ಶಿವ ನಿರ್ಗುಣ, ನಿರಾಕಾರ ಎಂದು ಹೇಳುತ್ತಾರೆ. ಹಿಂದೂಧರ್ಮದಲ್ಲಿ ಶಂಕರ ಮತದಲ್ಲಿ ಹೀಗೆ ಹೇಳಲಾಗಿದೆ. ಆದ್ದರಿಂದ ಲಿಂಗಪೂಜೆ ಶಿವಾರಾಧನೆಯನ್ನು ಒಪ್ಪಿದ ಮೇಲೆ ಲಿಂಗಾಯಿತ ಧರ್ಮ ಹಿಂದೂ ಧರ್ಮದಿಂದ ಬೇರೆಯಾಗಲು ಸಾಧ್ಯವಿಲ್ಲ ಎಂದವರು ವಿವರಿಸಿದರು.

ರಾಮಕೃಷ್ಣ ಆಶ್ರಮ ಆರ್ಯ ಸಮಾಜ, ಸ್ವಾಮಿನಾರಾಯಣ ಪಂಥ ಮೊದಲಾದ ಅನೇಕ ಧರ್ಮಗಳು ಜಾತಿ ವ್ಯವಸ್ಥೆಯನ್ನು ಒಪ್ಪದಿದ್ದರೂ ಅವರೆ ಲ್ಲರೂ ಹಿಂದುಗಳಾಗಿದ್ದಾರೆ. ಪಶ್ಚಿಮಬಂಗಾಳದಲ್ಲಿ ರಾಮಕೃಷ್ಣ ಆಶ್ರಮ ಪ್ರತ್ಯೇಕ ಧರ್ಮ ಎಂದು ವಾದಿಸಿದರೂ ಉಚ್ಚನ್ಯಾಯಾಲಯ ಅದನ್ನು ಮಾನ್ಯ ಮಾಡಲಿಲ್ಲ. ಹೀಗಾಗಿ ವೀರಶೈವ ಲಿಂಗಾಯಿತರು ಒಟ್ಟಾಗಿರಬೇಕು ಅಲ್ಲದೇ ಹಿಂದುಗಳಾಗಿರಬೇಕು ಎಂದು ಪೇಜಾವರಶ್ರೀ ನುಡಿದರು.

ಸರ್ವಪಕ್ಷ ಸರಕಾರ ಇರಲಿ: ರಾಜ್ಯದಲ್ಲಿ ಸರ್ವಪಕ್ಷದ ಸರಕಾರ ಆಡಳಿತ ನಡೆಸಲಿ ಎಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ಸಲಹೆ ನೀಡಿದ ಪೇಜಾವರಶ್ರೀ, ಇದರಿಂದ ರಾಜ್ಯವನ್ನು ಬಾಧಿಸುತ್ತಿರುವ ಎಲ್ಲಾ ಪಿಡುಗಿನಿಂದ ಜನರಿಗೆ ಮುಕ್ತಿದೊರೆಯುತ್ತದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸೇರಿ ಆಡಳಿತ ನಡೆಸುವುದರಿಂದ ಆಪರೇಷನ್ ನಡೆಸಬೇಕಾದ ಅಗತ್ಯವೇ ಬೀಳುವುದಿಲ್ಲ. ಇದರಿಂದ ಒಳ್ಳೆಯ ಆಡಳಿತವನ್ನು ನೀಡಬಹುದು. ಎರಡನೇ ಮಹಾಯುದ್ಧದ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ಇಂಥ ಸರಕಾರವಿತ್ತು ಎಂದರು.

ಲೌಕಿಕ ಉದ್ದೇಶ ಮಾತ್ರ ಇರುವುದು

ವೀರಶೈವ ಲಿಂಗಾಯತರು ತಾವು ಹಿಂದು ಧರ್ಮಕ್ಕೆ ಸೇರಿಲ್ಲ, ತಮ್ಮದು ಪ್ರತ್ಯೇಕ ಧರ್ಮ ಎಂದು ಹೇಳುವುದರಲ್ಲಿ ಲೌಕಿಕ ಉದ್ದೇಶ ಮಾತ್ರ ಇದೆ. ಜೈನ, ಬೌದ್ಧ ಧರ್ಮಗಳಂತೆ ತಾವು ಅಲ್ಪಸಂಖ್ಯಾತರೆಂದು ಹಣೆಪಟ್ಟಿ ಹೊಂದಿ ಸರಕಾರದ ಮೀಸಲಾತಿ ಸೌಲಭ್ಯ ಪಡೆಯುವ ಉದ್ದೇಶ ಇದರಲ್ಲಿದೆ ಎಂದು ಶ್ರೀವಿಶ್ವೇಶತೀರ್ಥ ಹೇಳಿದರು.

ಶೈವರು, ವೈಷ್ಣವರಲ್ಲಿ ಭಿನ್ನಮತವಿದೆ. ಆದರೆ ಅವರು ತಾವು ಹಿಂದುಗಳಲ್ಲ ಎಂದು ಹೇಳಿಲ್ಲ. ಹಾಗೆಯೇ ಅದ್ವೈತ ಮತ್ತು ದ್ವೈತ ತಮ್ಮ ತಮ್ಮ ಸಂಪ್ರದಾಯ ಗಳನ್ನು ಆಚರಿಸಿಕೊಂಡು ಸ್ನೇಹಸೌಹಾರ್ದದಿಂದ ಸಹೋದರ ಭಾವದಿಂದ ಹಿಂದೂ ಧರ್ಮದಲ್ಲಿಲ್ಲವೇ. ಅದೇ ರೀತಿ ವೀರಶೈವರು ಮತ್ತು ಲಿಂಗಾಯತರು ಒಟ್ಟಾಗಿದ್ದರೆ ಲಿಂಗಾಯತ ರ್ಮ ಬಲಿಷ್ಠವಾಗಿರುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News