ಶಿಕ್ಷಣದಿಂದ ಮಕ್ಕಳು ಸ್ವತಂತ್ರ ವ್ಯಕ್ತಿತ್ವ ರೂಪಿಸಲು ಸಾಧ್ಯ: ಡಾ.ಸಂತೋಷ ಕುಮಾರ್

Update: 2019-07-05 15:54 GMT

ಅಜೆಕಾರು, ಜು.5: ತಂದೆ ತಾಯಿಯರು ಮತ್ತು ಶಿಕ್ಷಣ ವ್ಯವಸ್ಥೆ ಮಕ್ಕಳು ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬೆಳೆಯಲು ಪೂರಕವಾಗಬೇಕು ಎಂದು ಖ್ಯಾತ ಸಮಾಜ ಸೇವಕ, ವೈದ್ಯ ಡಾ.ಸಂತೋಷ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಬಾಲ ಕಲಾವಿದೆ, ವಿಶ್ವ ದಾಖಲೆಗಳ ಸಾಧಕಿ ಬಾಲ ಕಲಾವಿದೆ ರೆಮೊನಾ ಅವರ ಶಾಲೆಗಳಲ್ಲಿ ಸರಣಿ ಕಾರ್ಯಕ್ರಮ ರೆಮನಾ ಕಲಾಯಾನವನ್ನು ಅಜೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ನರಸಿಂಹ ಬೊಮ್ಮರಬೆಟ್ಟು ಮಾತನಾಡಿ, ಮಾತೃ ಭಾಷೆ, ಪ್ರಾಂತ್ಯ ಭಾಷೆ, ದೇಶ ಭಾಷೆ, ಜಾಗತಿಕ ಭಾಷೆ ಎಲ್ಲವೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾಗಿದೆ. ಅವುಗಳನ್ನು ಮಕ್ಕಳ ಮೇಲೆ ಹೇರದೆ ಹಂತ ಹಂತವಾಗಿ ಕಲಿಸಿದರೆ ಪರಿಣಾಮಕಾರಿಯಾಗುತ್ತದೆ ಎಂದರು.

ರೆಮೊನಾ ಕಲಾಯಾನ 1ರ ಆಹ್ವಾನಿತ ಕಲಾವಿದೆ ಮೈಸೂರಿನ ನಾಲ್ಕನೇ ತರಗತಿಯ ಅನನ್ಯ ವಿ.ಎಸ್. ಮೈಸೂರು ಬಡಗುತಿಟ್ಟಿನ ಯಕ್ಷಗಾನ ನೃತ್ಯ ಪ್ರದರ್ಶನ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ ಆಚಾರ್ಯ, ಕಲಾವಿದೆ ಗ್ಲಾಡಿಸ್ ಪಿರೇರಾ ಮಂಗಳೂರು, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರಿ ಎಸ್.ಅಜೆಕಾರು, ಸದಸ್ಯೆ ಶಶಿಕಲಾ ಹೋಮಲ್ಕೆ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಶೇಖರ ಅಜೆಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯ ವಿಶ್ವನಾಥ ಸ್ವಾಗತಿಸಿದರು. ದೈಹಿಕ ಶಿಕ್ಷಕ ಪಾಂಡುರಂಗ ಆಚಾರ್ಯ ವಂದಿಸಿದರು. ವಿದ್ಯಾರ್ಥಿನಿ ಸಮೀಕ್ಷಾ ಬನಾನ್ ಬೈರೊಟ್ಟು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News