ನಿರ್ಮಲಾ ಸೀತಾರಾಮನ್ ಭಾಷಣದಲ್ಲಿ ಉರ್ದು, ಹಿಂದಿ, ತಮಿಳು, ಸಂಸ್ಕೃತ ವಚನಗಳು…

Update: 2019-07-05 16:50 GMT

ಹೊಸದಿಲ್ಲಿ,ಜು.5: ದೇಶದ ಮೊದಲ ಪೂರ್ಣಕಾಲಿಕ ವಿತ್ತಸಚಿವೆ ಎಂಬ ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ ಬಜೆಟ್ ಭಾಷಣವು ಉರ್ದು,ಹಿಂದಿ, ತಮಿಳು, ಸಂಸ್ಕೃತ ಉಕ್ತಿಗಳಿಂದ ಕೂಡಿದ್ದು,ಅತ್ಯಂತ ಸುದೀರ್ಘ ಬಜೆಟ್ ಭಾಷಣಗಳಲ್ಲೊಂದಾಗಿತ್ತು.

  ಎರಡು ಗಂಟೆ ಹದಿನೇಳು ನಿಮಿಷಗಳ ತನ್ನ ಮ್ಯಾರಥಾನ್ ಭಾಷಣದುದ್ದಕ್ಕೂ ಒಂದು ಗುಟುಕು ನೀರನ್ನು ಕುಡಿಯಲೂ ಅವರು ವಿರಮಿಸಲಿಲ್ಲ.

ಬಜೆಟ್ ಪ್ರಸ್ತಾವಗಳನ್ನು ಆಡಳಿತಾರೂಢ ಪಕ್ಷದ ಸದಸ್ಯರು ಆಗಾಗ್ಗೆ ಮೇಜುಗಳನ್ನು ಕುಟ್ಟಿ ಸ್ವಾಗಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೂ ಈ ವಿಷಯದಲ್ಲಿ ಹಿಂದೆ ಬಿದ್ದಿರಲಿಲ್ಲ.

ಸೀತಾರಾಮನ್ ಅವರ ಬಜೆಟ್ ಭಾಷಣವನ್ನು ಸ್ಪೀಕರ್ ಓಂ ಬಿರ್ಲಾ ಅವರು ಪ್ರಶಂಸಿಸಿದರು.

ಸೀತಾರಾಮನ್ ಬೆಳಿಗ್ಗೆ 10:55ಕ್ಕೆ ಕೆಲವೇ ಸೆಕೆಂಡ್‌ಗಳ ಮುನ್ನ ಸದನಕ್ಕೆ ಆಗಮಿಸಿ ಆಸೀನರಾಗುತ್ತಿದ್ದಂತೆ ಹಲವಾರು ಮಹಿಳಾ ಸದಸ್ಯರು ಅವರಿಗೆ ಶುಭಾಶಯಗಳನ್ನು ಕೋರಿದರು.

ಭಾಷಣ ಮಾಡಲು ಆತ್ಮವಿಶ್ವಾಸದಿಂದಲೇ ಎದ್ದು ನಿಂತ ಸೀತಾರಾಮನ್ ಗ್ಯಾಲರಿಯಲ್ಲಿ ಕುಳಿತಿದ್ದ ತನ್ನ ಹೆತ್ತವರಾದ ಸಾವಿತ್ರಿ ಮತ್ತು ನಾರಾಯಣನ್ ಸೀತಾರಾಮನ್ ಹಾಗೂ ಪತ್ರಕರ್ತೆ ಪುತ್ರಿ ವಾಂಗ್ಮಯಿ ಪರ್ಕಲ ಅವರತ್ತ ಕೈಬೀಸಿ ಶುಭಾಶಯಗಳನ್ನು ವಿನಿಮಯಿಸಿಕೊಂಡರು.

ತಮಿಳುನಾಡು ಮೂಲದವರಾದ ಸೀತಾರಾಮನ್ ಗ್ರಾಮೀಣ ಕುಶಲಕರ್ಮಿಗಳ ಕುರಿತು ಕೆಲವು ಪ್ರಕಟಣೆಗಳನ್ನು ಹಿಂದಿಯಲ್ಲಿ ಮಾಡಿದ್ದು ಸದಸ್ಯರ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.

ಹಿಂದಿ,ಉರ್ದು,ಸಂಸ್ಕೃತಗಳ ಜೊತೆಗೆ ತಮಿಳು ವಚನಗಳನ್ನೂ ಬಳಸಿದ್ದ ಸೀತಾರಾಮನ್ ಅವರು ‘‘ಯಕೀನ್ ಹೋ ತೊ ಕೊಯಿ ರಾಸ್ತಾ ನಿಕಲ್ತಾ ಹೈ,ಹವಾ ಕೀ ಓಟ್ ಭೀ ಲೇ ಕರ್ ಚಿರಾಗ್ ಜಲ್ತಾ ಹೈ’ ಎಂಬ ಕವಿ ಮಂಝೂರ್ ಹಾಷ್ಮಿ ಅವರ ಉರ್ದು ಕವನದ ಸಾಲುಗಳೊಂದಿಗೆ ತನ್ನ ಭಾಷಣವನ್ನು ಆರಂಭಿಸಿದ್ದರು.

ಆಡಳಿತಾರೂಢ ಪಕ್ಷದ ಆಸನಗಳು ಭರ್ತಿಯಾಗಿದ್ದರೆ ಪ್ರತಿಪಕ್ಷದಲ್ಲಿನ ಹಲವಾರು ಆಸನಗಳು ಖಾಲಿಯಾಗಿದ್ದವು. ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಅಖಿಲೇಶ್ ಗೈರುಹಾಜರಿ ಎಲ್ಲರ ಗಮನವನ್ನು ಸೆಳೆದಿತ್ತು. ರಾಜ್ಯಸಭಾ ಸದಸ್ಯರಿಗಾಗಿ ಮೀಸಲಾಗಿದ್ದ ಗ್ಯಾಲರಿಯು ಸಂಪೂರ್ಣವಾಗಿ ಭರ್ತಿಯಾಗಿತ್ತು. ಅತಿಥಿಗಳ ಗ್ಯಾಲರಿಯಲ್ಲಿ ಕೆಲವು ವಿದೇಶಿ ಗಣ್ಯರೂ ಇದ್ದರು.

ಸೀತಾರಾಮನ್ ಅವರು ಬಜೆಟ್ ಭಾಷಣವನ್ನು ಆರಂಭಿಸಿದ ಒಂದೆರಡು ನಿಮಿಷಗಳ ಬಳಿಕ ಸದನಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಾಗ್ಗೆ ತನ್ನ ಮೊಬೈಲ್ ಫೋನ್‌ನ್ನು ಪರಿಶೀಲಿಸುತ್ತಿದ್ದರೆ,ಅವರ ಪಕ್ಕದಲ್ಲಿಯೇ ಕುಳಿತಿದ್ದ ತಾಯಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾಷಣ ಮುಕ್ತಾಯಕ್ಕೆ ಕೆಲವು ನಿಮಿಷಗಳ ಮುನ್ನ ಸದನದಿಂದ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News