ಉಡುಪಿ: ಬಜೆಟ್ ಬಗ್ಗೆ ಗಣ್ಯರ ಪ್ರತಿಕ್ರಿಯೆಗಳು

Update: 2019-07-05 16:34 GMT

ಉಡುಪಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಥಮ ಬಾರಿಗೆ ಮಂಡಿಸಿದ ಕೇಂದ್ರ ಸರಕಾರದ 2019-20ನೇ ಸಾಲಿನ ಬಜೆಟ್ ದೀರ್ಘ ಕಾಲದ ದೂರದೃಷ್ಠಿ ಬಜೆಟ್ ಆಗಿದೆ. ಮುಖ್ಯವಾಗಿ ಗ್ರಾಮೀಣಾಭಿವೃದ್ದಿಗೆ ಒತ್ತು ನೀಡಿ 2022ರೊಳಗೆ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಮತ್ತು ಎಸ್‌ಪಿಜಿ ಸಂಪರ್ಕ ನೀಡುವ ಯೋಜನೆಯನ್ನು ಹೊಂದಿದೆ. ಹಲವಾರು ರೀತಿಯ ಯೋಜನೆ ಯನ್ನೊಳಗೊಂಡ ಈ ಬಜೆಟ್ ನವಭಾರತದ ಏಳಿಗೆಗೆ ಸಹಕಾರಿಯಾಗಿ 2024ರ ಒಳಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯುಳ್ಳ ವಿಶ್ವದ ನಂ.1 ದೇಶವಾಗಿ ಹೊರಹೊಮ್ಮಲಿದೆ.

-ಸಿಎ ನರಸಿಂಹ ನಾಯಕ್, ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆಯ ಉಡುಪಿ ಶಾಖೆ ಅಧ್ಯಕ್ಷ.

*ಕೇಂದ್ರ ಸರಕಾರದ ಆಯ-ವ್ಯಯದಲ್ಲಿ ಉನ್ನತ ಶಿಕ್ಷಣಕ್ಕೆ ಆದ್ಯತೆ, 60ವರ್ಷ ಮೀರಿದ ಕಾರ್ಮಿಕರಿಗೆ 3,000ರೂ. ಪಿಂಚಣಿ, ಎರಡು ವರ್ಷದಲ್ಲಿ ಎಲ್ಲಾ ಕುಟುಂಬಗಳಿಗೂ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ, 5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ, ಜಿಎಸ್‌ಟಿ ದರ ಶೇ.2ಕ್ಕೆ ಇಳಿಕೆ, ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ ಒಟ್ಟಾರೆ ದೇಶ ಕಟ್ಟುವ ಕೆಲಸಕ್ಕೆ ಮೋದಿಜೀ ಪ್ರಯತ್ನ ಶ್ಲಾಘನೀಯ. ಇದು ಅತ್ಯುತ್ತಮ ಹಾಗೂ ದೂರಗಾಮಿ ಬಜೆಟ್.
-ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ವಿಧಾನಪರಿಷತ್‌ನ ವಿಪಕ್ಷ ಅಧ್ಯಕ್ಷ

*ಕೇಂದ್ರದ ಎರಡನೇ ಮಹಿಳಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ದೇಶದ ಅಭಿವೃದ್ಧಿ ಹಾಗೂ ಬಡಜನರ ಏಳಿಗೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಅದರಲ್ಲೂ ಕರಾವಳಿ ಭಾಗದ ಜನತೆಗೆ ಅಂದರೆ ಮೀನುಗಾರರ ಸುಧಾರಣೆಗೆ ಕ್ರಮ ಹಾಗೂ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಜಾರಿಗೊಳಿಸಿ ಪಶುಸಂಗೋಪನೆ ಸಹಿತವಾಗಿ 3737 ಕೋಟಿ ರೂ. ವಿಶೇಷ ಅನುದಾನ ನೀಡಿರುವುದು ಕರಾವಳಿ ಭಾಗದ ಜನತೆಗೆ ಸಂತಸವನ್ನು ತಂದಿದೆ. ಇನ್ನು 5 ಲಕ್ಷಕ್ಕಿಂತ ಕಡಿಮೆ ಆದಾಯದಾರರ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದು ಮಧ್ಯಮ ವರ್ಗದ ಜನರಿಗೆ ನೀಡಿರುವ ಅತಿ ದೊಡ್ಡ ಉಡುಗೊರೆ. ವಿದ್ಯುತ್ ಚಾಲಿತ ವಾಹನಗಳಿಗೆ 1.50ಲಕ್ಷ ರೂ. ಪ್ರೋತ್ಸಾಹ ಧನ ಹಾಗೂ ಶೇ.12ರಷ್ಟಿದ್ದ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಿದ್ದು, ಗೃಹಸಾಲಕ್ಕೆ ಪ್ರಾಶಸ್ತ್ಯ, ಕುಡಿಯುವ ನೀರಿನ ಯೋಜನೆಗೆ ಹರ್ ಘರ್ ಜಲ್ ಯೋಜನೆ ಹೀಗೆ ಅನೇಕ ಯೋಜನೆಗಳು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉತ್ತಮ ಕೊಡುಗೆಯಾಗಿದೆ. ಭಾರತದ ಮುಂದಿನ ಭವಿಷ್ಯಕ್ಕೆ ಹೆಚ್ಚಿನ ಪರಿಣಾಮ ಬೀರುವ ಬಜೆಟ್ ಇದಾಗಿದೆ.
-ಕೆ ರಘುಪತಿ ಭಟ್, ಉಡುಪಿ ಶಾಸಕ

*ಐದು ಲಕ್ಷ ರೂ.ವರೆಗೆ ಆದಾಯದವರಿಗೆ ಆದಾಯ ತೆರಿಗೆಯಿಂದ ವಿನಾಯತಿಯನ್ನು ಮುಂಗಡ ಪತ್ರದಲ್ಲಿ ನೀಡಿರುವುದು ಸ್ವಾಗತಾರ್ಹ. ಪಿಂಚಣಿದಾರರಿಗೆ ಇದರಿಂದ ಸಂತೋಷವಾಗಿದೆ.
-ಎಸ್. ಎಸ್. ತೋನ್ಸೆ, ನಿವೃತ್ತ ನೌಕರರ ಜಿಲ್ಲಾ ಸಂಘದ ಕಾರ್ಯದರ್ಶಿ

 *ಈ ಬಜೆಟ್ ಹಳೆ ಮದ್ಯ ಹೊಸ ಬಾಟಲಿಯಲ್ಲಿ ಅನ್ನೋ ಹಾಗಿದೆ. ಯಾವುದೇ ಹೊಸ ಕಾರ್ಯಕ್ರಮ ಇಲ್ಲದ ಬಜೆಟ್. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಒಂದು ರೂ. ಹೆಚ್ಚಳ ಜನಸಾಮಾನ್ಯರ ಮೇಲೆ ಬರೆ ಬಿದ್ದ ಹಾಗೆ ಆಗಿದೆ. ನಿರ್ಮಲ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಅಯ್ಕೆ ಆಗಿದ್ದರೂ ನಮಗೆ ಯಾವುದೇ ವಿಶೇಷ ಯೋಜನೆ ಕೊಡದಿರುವುದು ವಿಷಾದನೀಯ....
-ಯೋಗೀಶ್ ವಿ. ಶೆಟ್ಟಿ, ಜಿಲ್ಲಾಧ್ಯರು ಜಾತ್ಯಾತೀತ ಜನತಾ ದಳ ಉಡುಪಿ

 *ಕೃಷಿಗೆ ಯಾವುದೇ ನೀತಿ, ಯೋಜನೆಗಳನ್ನು ರೂಪಿಸದೇ, ರೈತರಿಗೆ ಬೆಂಬಲ ಬೆಲೆಯನ್ನು ಘೋಷಿಸದೇ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ ಬಜೆಟ್. ಪೆಟ್ರೋಲ್, ಡಿಸೇಲ್, ಚಿನ್ನ, ಆಮದು ಪುಸ್ತಕಗಳು, ಡಿಜಿಟಲ್ ವಸ್ತು, ಅಟೋಮೊಬೈಲ್ ಬಿಡಿಭಾಗಗಳ ಸುಂಕ ಏರಿಕೆಯಿಂದ ಮದ್ಯಮ ವರ್ಗದ ಮೇಲೆ ಹೆಚ್ಚಿನ ಹೊರೆ, ಖಾಸಗಿ ಹೂಡಿಕೆಗೆ ಹೆಚ್ಚು ಒತ್ತು ನೀಡಿ ಬಂಡವಾಳಶಾಹಿಗಳ ಪರವಾಗಿ ಒಲವು ವ್ಯಕ್ತವಾಗಿದೆ. ಯುವಕರ ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ, ಬಹುನಿರೀಕ್ಷೆಯಲ್ಲಿದ್ದ ಮಂಗಳೂರು ರೈಲ್ವೆ ವಿಭಾಗೀಯ ಕಚೇರಿ ಪ್ರಾರಂಭ ಹುಸಿಯಾಗಿದೆ. ಒಟ್ಟಾರೆ ಬಜೆಟ್‌ನಲ್ಲಿ ಸಿಹಿಗಿಂತ ಕಹಿಯೇ ಹೆಚ್ಚಾಗಿದೆ.
-ಭಾಸ್ಕರ ರಾವ್ ಕಿದಿಯೂರು, ಜಿಲ್ಲಾ ಕಾಂಗ್ರೆಸ್ ವಕ್ತಾರ ಉಡುಪಿ.

*2019-20ನೇ ಸಾಲಿನ ಕೇಂದ್ರ ಬಜೆಟ್ ಸಮಾಜದ ಎಲ್ಲಾ ವರ್ಗದ ಜನರ ನಿರೀಕ್ಷೆಗೆ ಪೂರಕವಾಗಿ, ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದಿರುವ ಅತ್ಯುತ್ತಮ ಬಜೆಟ್. ಮಹಿಳಾ ಸಬಲೀಕರಣ, ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಒಂದು ಲಕ್ಷ ರೂ.ವರೆಗೆ ಸಾಲ, ಜನಧನ್ ಯೋಜನೆಯಲ್ಲಿ 5ಸಾವಿರ ರೂ. ಓ.ಡಿ.ಸೌಲಭ್ಯ, ಮೀನುಗಾರಿಕೆಗೆ ಮತ್ಸ ಸಂಪದ ಯೋಜನೆ ಜಾರಿ, ಕೃಷಿಗೆ ಉತ್ತೇಜನ, ಯುವಕರಿಗೆ ತರಬೇತಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ಯೋಜನೆಗೆ ಒತ್ತು ನೀಡಿರುವ ಈ ಬಜೆಟ್ ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೇಶದ ಅಭಿವೃದ್ಧಿಯ ಕನಸು ನನಸು ಮಾಡುವ ಪೂರಕ ಬಜೆಟ್.
-ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಉಡುಪಿ.

ನಿರ್ಮಲ ಸೀತಾರಾಮನ್ ಇಂದು ಸಂಸತ್‌ನಲ್ಲಿ ಮಂಡಿಸಿದ ಬಜೆಟ್ ಜನಸಾಮಾನ್ಯರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡ ಬಜೆಟ್.ದವಸ ಧಾನ್ಯಗಳಿಗೆ ಬೆಂಬಲ ಬೆಲೆ ಹೆಚ್ಚಿಸಿ ಕೃಷಿಗೆ ಉತ್ತೇಜನ ನೀಡಿದಲ್ಲದೇ, ಕರಾವಳಿ ಭಾಗದ ಮೀನುಗಾರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಗೆ ಚಾಲನೆ ನೀಡುವ ಕ್ರಮಕೈಗೊಂಡಿದ್ದು, ಗೃಹ ಸಾಲಕ್ಕೆ ಒತ್ತು ನೀಡಲಾಗಿದೆ. ಇದು ದೇಶದ ಎಲ್ಲಾ ಸ್ತರಗಳ ಜನರ ಶ್ರೇಯೋಭಿವೃದ್ಧಿ ಯನ್ನು ಕಾಪಾಡುವ ಬಜೆಟ್ ಆಗಿದೆ.

-ದಿನಕರಬಾಬು, ಉಡುಪಿ ಜಿಪಂ ಅಧ್ಯಕ್ಷ

*ಗ್ರಾಮೀಣ ಭಾಗದ ಜನರಿಗೆ ಭರಪೂರ ಲಾಭ ತಂದುಕೊಡುವ ಬಜೆಟ್ ಇದಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1.95 ಕೋಟಿ ಮನೆಗಳ ನಿರ್ಮಾಣದ ಗುರಿಯೊಂದಿಗೆ 195ದಿನಗಳಲ್ಲಿ ಮನೆ ನಿರ್ಮಾಣದ ಗುರಿಯನ್ನು 114ದಿನಗಳಿಗೆ ಇಳಿಸಿರುವುದು ಶ್ಲಾಘನೀಯ. ಈ ಮನೆಗಳಿಗೆ ನೀರು, ವಿದ್ಯುತ್ ಮತ್ತು ಎಲ್‌ಪಿಜಿ ಗ್ಯಾಸ್ ಸಂಪರ್ಕ ಸಹ ನೀಡಲಾಗುತ್ತದೆ. ಪ್ರಧಾನಮಂತ್ರಿ ಮತ್ಸಸಂಪದ ಯೋಜನೆಯಡಿ 1.5 ಕೋಟಿ ಮೀನುಗಾರರಿಗೆ ಪ್ರಯೋಜನ ಸಿಗಲಿದೆ. ಇದು ಹಿಂದುಳಿದ ಮತ್ತು ಮಧ್ಯಮ ವರ್ಗದ ಜನರಿಗೆ ಪೂರಕವಾದ ಬಜೆಟ್.
-ಕೆ.ಉದಯಕುಮಾರ್ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ, ಮಂಗಳೂರು ವಿಭಾಗದ ಉಸ್ತುವಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News