ಗಾಂಧಿ ಉಡುಪು ಧರಿಸಿದ ವೃದ್ಧನಿಗೆ ರೈಲು ಪ್ರಯಾಣಕ್ಕೆ ಅವಕಾಶ ನಿರಾಕರಣೆ !

Update: 2019-07-05 16:35 GMT

ಲಕ್ನೋ, ಜು. 5: ಗಾಂಧಿ ಉಡುಪು ಧರಿಸಿದ್ದ ವೃದ್ಧರೋರ್ವರಿಗೆ ರೈಲು ಹತ್ತಲು ನಿರಾಕರಿಸಿದ ಘಟನೆ ಉತ್ತರಪ್ರದೇಶದ ಇಟಾವಾದಲ್ಲಿ ಶುಕ್ರವಾರ ನಡೆದಿದೆ. ಗಾಝಿಯಾಬಾದ್‌ಗೆ ಪ್ರಯಾಣಿಸುವ ಟಿಕೆಟ್ ಹೊಂದಿರುವ ಹೊರತಾಗಿಯೂ 72ರ ಹರೆಯದ ಬಾಬಾ ರಾಮ್ ಅವಧ್ ದಾಸ್ ಅವರಿಗೆ ಶತಾಬ್ದಿ ಎಕ್ಸ್‌ಪ್ರೆಸ್‌ನ ಮೀಸಲು ಬೋಗಿಗೆ ಏರಲು ಬೋಗಿಯ ಸಿಬ್ಬಂದಿ ಅವಕಾಶ ನೀಡಲಿಲ್ಲ. ದಾಸ್ ಅವರು ಮಾಡಿದ ಒಂದೇ ಒಂದು ತಪ್ಪು ಧೋತಿ ಉಟ್ಟಿರುವುದು, ಬಟ್ಟೆಯ ಚೀಲ ಹಾಗೂ ಕೊಡೆ ಹಿಡಿದುಕೊಂಡಿರುವುದು.

‘‘ಜುಲೈ 5ರ ಖಾನ್ಪುರ-ಹೊಸದಿಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ 12033 ರೈಲಿನ ಬೋಗಿ ಸಿ-2 ಸೀಟಿನ ಸಂಖ್ಯೆ 72ರ ಟಿಕೆಟ್ ಅನ್ನು ಮುಂಗಡ ಕಾಯ್ದಿರಿಸಿದ್ದೆ. ಬೆಳಗ್ಗೆ 7.40ಕ್ಕೆ ಇಟಾವಾ ನಿಲ್ದಾಣಕ್ಕೆ ರೈಲು ಬಂತು. ನಾನು ಹತ್ತಲು ಪ್ರಯತ್ನಿಸಿದೆ. ಆದರೆ, ಗೇಟಿನಲ್ಲಿ ನಿಂತಿದ್ದ ಭದ್ರತಾ ಸಿಬ್ಬಂದಿ ರೈಲು ಹತ್ತಲು ಅವಕಾಶ ನೀಡಲಿಲ್ಲ. ಅನಂತರ ಭದ್ರತಾ ಸಿಬ್ಬಂದಿ ಹಾಗೂ ಬೋಗಿಯ ಸಿಬ್ಬಂದಿ ನನ್ನ ಉಡುಪಿನ ಬಗ್ಗೆ ತಮಾಷೆ ಮಾಡಿದರು ಹಾಗೂ ಲೈಲಿನಿಂದ ಇಳಿಯುವಂತೆ ತಿಳಿಸಿದರು ಎಂದು ದಾಸ್ ಹೇಳಿದ್ದಾರೆ.

‘‘ನಾನು ಟಿಕೆಟ್ ತೋರಿಸಿದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ. ಅವರು ನನ್ನನ್ನು ರೈಲಿನಿಂದ ಇಳಿಸಿದರು. ಎರಡು ನಿಮಿಷಗಳ ಬಳಿಕ ರೈಲು ತೆರಳಿತು. ನಾನು ನಿಲ್ದಾಣಕ್ಕೆ ಹಿಂದಿರುಗಿದೆ’’ ಎಂದು ದಾಸ್ ಹೇಳಿದ್ದಾರೆ.

ದಾಸ್ ಅವರು ಸ್ಟೇಷನ್ ಮಾಸ್ಟರ್ ಪ್ರಿನ್ಸ್ ರಾಜ್ ಯಾದವ್ ಅವರನ್ನು ಭೇಟಿಯಾಗಿ ಘಟನೆಯನ್ನು ವಿವರಿಸಿದ್ದಾರೆ. ಸ್ಟೇಷನ್ ಮಾಸ್ಟರ್ ಅನಂತರ ಆಗಮಿಸುವ ರೈಲು ಮಗಧ ಎಕ್ಸ್‌ಪ್ರೆಸ್‌ಗೆ ಸೀಟು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ದಾಸ್ ಅವರ ಸಹಾಯವನ್ನು ನಿರಾಕರಿಸಿದ್ದಾರೆ. “ರೈಲ್ವೆ ನನಗೆ ಅವಮಾನ ಮಾಡಿದೆ. ಈ ಬಗ್ಗೆ ನಾನು ದೂರು ನೀಡುತ್ತೇನೆ” ಎಂದು ದಾಸ್ ಹೇಳಿದ್ದಾರೆ. ದಾಸ್ ಅವರು ಶುಕ್ರವಾರ ದೂರು ದಾಖಲಿಸಿದ್ದಾರೆ.

 “ಈ ವಿಷಯದ ಬಗ್ಗೆ ನನಗೆ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ನಾನು ಅವರನ್ನು ಭೇಟಿಯಾಗಿಲ್ಲ. ಅವರು ದೂರು ಪುಸ್ತಕದಲ್ಲಿ ಬರೆದಿರುವುದು ಮಾತ್ರ ನನಗೆ ಗೊತ್ತು” ಎಂದು ಇಟಾವ್ ರೈಲು ನಿಲ್ದಾಣದ ಅಧೀಕ್ಷಕ ಪುರನ್ಮಲ್ ಮೀನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News