ಯಕ್ಷಗಾನ ಬ್ಯಾನರ್‌ನಲ್ಲಿ ದಲಿತರಿಗೆ ನಿಂದನೆ: ದಸಂಸ ಖಂಡನೆ
ಮಂಗಳೂರು, ಜು.5: ಕಟೀಲು ಶ್ರೀ ಯಕ್ಷಕಲಾ ತಂಡದ ಅನಂತರಾಮ ಬಂಗಾಡಿ ವಿರಚಿತ ‘ಬ್ರಹ್ಮ ಬಲಾಂಡಿ’ ತುಳು ಯಕ್ಷಗಾನದ ಸಂಯೋಜಕ ಪೂರ್ಣೇಶ್ ಆಚಾರ್ಯ ಹಾಗೂ ವೇಷಧಾರಿ ಮಿಜಾರು ತಿಮ್ಮಪ್ಪ ಎಂಬವರು ಎಸ್ಸಿ-ಎಸ್ಟಿ ನಿಷೇಧಿತ ಪದ (ಮುಂಡಾಲ ದಿಕ್ಕ) ಬಳಸಿ ಯಕ್ಷಗಾನದ ಬ್ಯಾನರ್‌ನಲ್ಲಿ ಅಳವಡಿಸಿರುವುದರಿಂದ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯು ಶುಕ್ರವಾರ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ಆಗ್ರಹಿಸಿದೆ.
ಮಂಗಳೂರು ತಾಲೂಕಿನ ಕಟೀಲು ಶ್ರೀ ಯಕ್ಷಕಲಾ ತಂಡದ ಅನಂತರಾಮ ಬಂಗಾಡಿ ವಿರಚಿತ ‘ಬ್ರಹ್ಮ ಬಲಾಂಡಿ’ ತುಳು ಯಕ್ಷಗಾನವು ನಗರದ ಪುರಭವನದಲ್ಲಿ ಜು.20ರಂದು ರಾತ್ರಿ 9:30ಕ್ಕೆ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ಸಂಯೋಜಕ ಯಕ್ಷಕಲಾ ಕಟೀಲು ಪೂರ್ಣೇಶ್ ಆಚಾರ್ಯ ಹಾಗೂ ವೇಷಧಾರಿ ಮಿಜಾರು ತಿಮ್ಮಪ್ಪ ಎಂಬವರು ನಗರದ ವಿವಿಧೆಡೆ ಬ್ಯಾನರ್‌ಗಳನ್ನು ಅಳವಡಿಸಿ ಅದರಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿಷೇಧಿತ ಪದ ಜಾತಿನಿಂದನೆ ಮಾಡಿ ಸಮಸ್ತ ದಲಿತ ಸಮುದಾಯಕ್ಕೆ ಅವಮಾನಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.
ನಿಷೇಧಿತ ಪದಬಳಸಿ ಅವಮಾನಿಸಿದ ಪೂರ್ಣೇಶ್ ಆಚಾರ್ಯ ಹಾಗೂ ವೇಷಧಾರಿ ಮಿಜಾರು ತಿಮ್ಮಪ್ಪ ವಿರುದ್ಧ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜಿಲ್ಲೆಯಿಂದ ಗಡೀಪಾರು ಮಾಡಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಪುರಭವನದಲ್ಲಿ ನಡೆಯುವ ಯಕ್ಷಗಾನ ಕಾರ್ಯಕ್ರಮಮದ ದಿನ ದಸಂಸ (ಅಂಬೇಡ್ಕರ್‌ವಾದ) ಜಿಲ್ಲಾ ಸಮಿತಿ ಹಾಗೂ ವಿವಿಧ ತಾಲೂಕು ಸಮಿತಿ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದೆ.
ನಿಯೋಗದಲ್ಲಿ ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ, ಜಿಲ್ಲಾ ಸಂಘಟನಾ ಸಂಚಾಲಕ ಸದಾಶಿವ ಉರ್ವಸ್ಟೋರ್, ಮಂಗಳೂರು ತಾಲೂಕು ಸಂಚಾಲಕ ಸೂರ್ಯಪ್ರಕಾಶ್ ಮುಲ್ಕಿ, ಕೆ.ಚಂದ್ರ, ಸುನೀಲ್ ಅದ್ಯಪಾಡಿ, ಸೀತಾರಾಮ ಅದ್ಯಪಾಡಿ, ಸುಂದರ ಬಳ್ಳಾಲ್‌ಭಾಗ್, ಸುರೇಂದ್ರ ಕೋಟಿಮುರ, ಜಯಕುಮಾರ್ ಹಾದಿಗೆ ಉಪಸ್ಥಿತರಿದ್ದರು.