ಕೃಷಿ ವಲಯದ ಯೋಜನೆ, ರಕ್ಷಣಾ ಕ್ಷೇತ್ರಕ್ಕೆ ಅನುದಾನದ ಮಾಹಿತಿಯೇ ಇಲ್ಲದ ಬಜೆಟ್: ಚಿದಂಬರಂ ಟೀಕೆ

Update: 2019-07-05 17:23 GMT

ಹೊಸದಿಲ್ಲಿ, ಜು.5: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅತ್ಯಂತ ಅಸ್ಪಷ್ಟ ಮತ್ತು ಅಪಾರದರ್ಶಕ ಬಜೆಟ್ ಎಂದು ಮಾಜಿ ವಿತ್ತ ಸಚಿವ, ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಟೀಕಿಸಿದ್ದು, ಇದರಲ್ಲಿ ಸರಕಾರದ ಆದಾಯ, ವೆಚ್ಚ, ಹಣಕಾಸಿನ ಕೊರತೆ, ರಕ್ಷಣಾ ಕ್ಷೇತ್ರಕ್ಕೆ ನೀಡಿರುವ ಅನುದಾನ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿಯೇ ಇಲ್ಲ ಎಂದಿದ್ದಾರೆ.

ಬಜೆಟ್ ಭಾಷಣವನ್ನು ಕೇಳುವ ಬಹುತೇಕ ಮಂದಿಗೆ ಬಜೆಟ್ ಪ್ರತಿ ದೊರಕುವುದಿಲ್ಲ. ಸಂಸದರಿಗೆ, ಅಧಿಕಾರಿಗಳಿಗೆ, ಚಿಂತಕರಿಗೆ ಬಜೆಟ್ ಪ್ರತಿ ಲಭ್ಯವಿರುತ್ತದೆ. ಆದರೆ ಪ್ರತಿಗಳನ್ನು ಪಡೆಯದವರಿಗೆ ಸರಕಾರದ ಆದಾಯ, ಖರ್ಚು, ಹಣಕಾಸಿನ ಕೊರತೆಯ ಬಗ್ಗೆ ಹೇಳಬೇಕಾಗುತ್ತದೆ. ಇದನ್ನು ಹೇಳಲು ನೀವೇಕೆ ಹೆದರುತ್ತೀರಿ, ಜನರನ್ನು ಕತ್ತಲಲ್ಲಿ ಇಡುವುದೇಕೆ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

ರಕ್ಷಣಾ ಕ್ಷೇತ್ರಕ್ಕೆ ಎಷ್ಟು ಅನುದಾನ ನಿಗದಿಯಾಗಿದೆ ಎಂಬ ಮಾಹಿತಿಯೂ ಇಲ್ಲ. ಅಲ್ಲದೆ ವಿತ್ತ ಸಚಿವೆಯ ಭಾಷಣದಲ್ಲಿ ಕೃಷಿ ವಲಯದ ಬಗ್ಗೆ ಸರಕಾರ ಹೊಂದಿರುವ ಯೋಜನೆಯ ವಿವರವಿಲ್ಲ. ದೇಶದ ರೈತರು ಕಳೆದ ಕೆಲ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಯ ಹಿನ್ನೆಲೆಯಲ್ಲಿ ಈ ವಿವರಣೆ ಮಹತ್ವದ್ದಾಗಿದೆ. ಸರಕಾರ ಕೃಷಿ ಕ್ಷೇತ್ರದ ಸುಧಾರಣೆಗೆ ನೀಲನಕ್ಷೆಯ ವಿವರ ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News