ಅತ್ಯಾಚಾರ ಆರೋಪಿಗಳ ಪರ ವಾದ ಮಾಡದಂತೆ ರಮಾನಾಥ ರೈ ಮನವಿ
ಬಂಟ್ವಾಳ, ಜು. 5: ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಒತ್ತಾಯಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬಿ.ಸಿ.ರೋಡ್ ಜಂಕ್ಷನ್‍ನಲ್ಲಿ ಧರಣಿ ನಡೆಯಿತು.
ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಕಾಲೇಜು ವಿದ್ಯಾರ್ಥಿನಿಯನ್ನು ಸಹಪಾಠಿಗಳೇ ಅತ್ಯಾಚಾರ ಮಾಡಿರುವುದು ಖಂಡನೀಯ. ಅತ್ಯಾಚಾರ ಆರೋಪಿಗಳ ಪರವಾಗಿ ಯಾರೂ ವಕೀಲರು ವಾದ ಮಾಡದಂತೆ ಮನವಿ ಮಾಡಿಕೊಂಡರು.
ಪ್ರತಿಬಾರಿ ಮಹಿಳೆಯರ ಮೇಲೆ ದೌರ್ಜನ್ಯಗಳಾದಾಗ ಧರ್ಮದ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಂಘಟನೆಗಳು ಪರಿಶಿಷ್ಟ ಜಾತಿಯ ಹೆಣ್ಣು ಮಗಳ ಮೇಲೆ ಅತ್ಯಾಚಾರವಾದಾಗ ಮೌನವಾಗಿರುವುದು ಹಲವಾರು ಸಂದೇಹಕ್ಕೆ ಎಡೆಮಾಡಿ ಕೊಟ್ಟಿದೆ. ಅತ್ಯಾಚಾರ ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ಪೊಲೀಸರಿಗೆ ಒತ್ತಡಗಳು ಬರುವ ಸಾಧ್ಯತೆ ಇದೆ. ಆದರೆ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯಬಾರದು. ಕೆಲವೊಂದು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಒತ್ತಡ ತರುವ ಕಾರ್ಯವನ್ನು ಚುನಾಯಿತ ಪ್ರತಿನಿಒಧಿಯೊಬ್ಬರು ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಆರೋಪಿಸಿದರು.
ಆರೋಪಿಯ ಜೊತೆಗಿರುವ ಭಾವಚಿತ್ರ ಹರಿದಾಡುತ್ತಿದ್ದಂತೆಯೇ ಕಂಗಾಲಾಗಿದ್ದಾರೆ. ಆದರೆ, ರಮನಾಥ ರೈಗೆ ಆದಷ್ಟು ತೇಜೋವಧೆ ಯಾರಿಗೂ ಆಗಿಲ್ಲ. ಸಚ್ಚಾರಿತ್ರ್ಯದ ಜನ ಸೇವೆ ಮಾಡುತ್ತಿದ್ದರೂ ನೈಜವಾದ ವಿಚಾರ ಮರೆ ಮಾಚಿ ನಿರಂತರವಾಗಿ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿದರು.
ಕರ್ತವ್ಯದಲ್ಲಿದ್ದ ವೈದ್ಯೆಯ ಮೇಲೆ ಹಲ್ಲೆ ಮಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷತೆಯ ವರ್ತನೆಯೂ ಖಂಡನೀಯ ಎಂದರು.
ಪಕ್ಷ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಎಂ.ಎಸ್. ಮುಹಮ್ಮದ್, ಅಬ್ಬಾಸ್ ಅಲಿ, ರಾಜಶೇಖರ ನಾಯಕ್, ಐಡಾ ಸುರೇಶ್, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಲುಕ್ಮಾನ್, ಮುಹಮ್ಮದ್ ನಂದರಬೆಟ್ಟು, ನಸೀಮಾ ಬೇಗಂ, ಸಂಜೀವ ಪೂಜಾರಿ, ಸಿದ್ದೀಕ್ ಗುಡ್ಡೆಯಂಗಡಿ, ಪ್ರಶಾಂತ್ ಕುಲಾಲ್, ಮುಹಮ್ಮದ್ ಶಫಿ ಮೊದಲಾದವರು ಹಾಜರಿದ್ದರು.