×
Ad

ಆರೋಪಿಗಳು ಎಬಿವಿಪಿ ಕಾರ್ಯಕರ್ತರಲ್ಲ: ರೋಹಿಣಾಕ್ಷ ಶಿರ್ಲಾಲು

Update: 2019-07-05 23:26 IST

ಪುತ್ತೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಸೆರೆಯಾದ ವಿದ್ಯಾರ್ಥಿಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟ ಪ್ರಕರಣದಲ್ಲಿ ಬಂಧಿತರಾಗಿರುವ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ಸದಸ್ಯರಲ್ಲ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನ ರಾಜ್ಯ ಉಪಾಧ್ಯಕ್ಷ ರೋಹಿಣಾಕ್ಷ ಶಿರ್ಲಾಲು ತಿಳಿಸಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಎರಡು ದಿನಗಳಿಂದ ಈ ಪ್ರಕರಣದ ಆರೋಪಿಗಳ ಹೆಸರನ್ನು ಮುಂದಿಟ್ಟುಕೊಂಡು  ಎಬಿವಪಿಯನ್ನು ಟಾರ್ಗೆಟ್ ಮಾಡುವ ಕೆಲಸ ನಡೆಯುತ್ತಿರುವುದು ಸರಿಯಲ್ಲ. ಪುತ್ತೂರು ವಿವೇಕಾನಂದ ಕಾಲೇಜ್ ಕ್ಯಾಂಪಸ್‍ನಲ್ಲಿ ಸುಮಾರು ಎಂಟು ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದಾರೆ. ಇವರಲ್ಲಿ ಮೂರು ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಅಧಿಕೃತ ಸದಸ್ಯರಾಗಿದ್ದಾರೆ. ಇವರನ್ನು ಹೊರತುಪಡಿಸಿ ಉಳಿದವರು ಸಂಘಟನೆಯ ಸದಸ್ಯರಲ್ಲ ಎಂದು ಸ್ಪಷ್ಟ ಪಡಿಸಿದರು.

ಪುತ್ತೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡನೀಯ. ನಾಗರಿಕ ಸಮಾಜದಲ್ಲಿರುವ ಯಾರೂ ಕೂಡ ಈ ಘಟನೆಯನ್ನು ಖಂಡಿಸದೇ ಇರಲು ಸಾಧ್ಯವೇ ಇಲ್ಲ. ಎಬಿವಿಪಿ ಕೂಡ ಈ ಘಟನೆಯನ್ನು ಬಲವಾಗಿ ಖಂಡಿಸುತ್ತದೆ. ಪ್ರಕರಣದ ಆರೋಪಿಗಳನ್ನು ಪೊಲೀಸರು ತಕ್ಷಣ ಬಂಧಿಸಿರುವುದು ಅಭಿನಂದನೀಯ. ಈ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಪ್ರಕರಣದ ವಿಚಾರಣೆ ಸುದೀರ್ಘ ಅವಧಿಗೆ ಮುಂದುವರಿಯುವಂತೆ ಆಗಬಾರದು. ತ್ವರಿತ ವಿಚಾರಣೆ ನಡೆಸುವಂತಾಗಬೇಕು. ಆ ಮೂಲಕ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗುವು ದನ್ನು ಖಾತ್ರಿಪಡಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.

ಅತ್ಯಾಚಾರ ಆರೋಪಿಗಳು ಈ ಹಿಂದೆ ಕೇಸರಿ ಶಾಲು ಧರಿಸಿದ್ದ ಫೊಟೋ, ಬೇರೆ ಬೇರೆ ನಾಯಕರ ಜತೆ ನಿಂತ ಫೋಟೋಗಳನ್ನು ಬಳಸಿಕೊಂಡು ಇವರೆಲ್ಲ ಎಬಿವಿಪಿ ಕಾರ್ಯಕರ್ತರು ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕೇಸರಿ ಶಾಲು ಧರಿಸಿದ ಮಾತ್ರಕ್ಕೆ ಎಬಿವಿಪಿ ಸದಸ್ಯರು ಎಂದು ವ್ಯಾಖ್ಯಾನ ಮಾಡಲು ಬರುವುದಿಲ್ಲ. ನಮ್ಮ ಪದಾಧಿಕಾರಿಗಳು ಯಾರು, ನಮ್ಮ ಸದಸ್ಯರು ಯಾರು ಎಂಬ ಬಗ್ಗೆ ನಮ್ಮಲ್ಲಿ ಸ್ಪಷ್ಟ ಮಾಹಿತಿ, ದಾಖಲೆ ಇದೆ. ಎಬಿವಿಪಿ ವತಿಯಿಂದ ಏರ್ಪಡಿಸಲಾದ ಪ್ರತಿಭಟನೆ, ರ್ಯಾಲಿ ಮುಂತಾದ ಕಾರ್ಯಕ್ರಮಗಳಲ್ಲಿ ಅಭಿಮಾನದಿಂದ ಭಾಗವಹಿಸಿದವರು ಇರಬಹುದು. ಹಾಗೆಂದು ಅವರೆಲ್ಲರನ್ನು ನಾವು ಎಬಿವಿಪಿ ಸದಸ್ಯರು ಎಂದು ಹೇಳಲು ಸಾಧ್ಯವಿಲ್ಲ ಎಂದರು. 

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡ ಸಂಘಟನೆಯಲ್ಲ. ವಿದ್ಯಾರ್ಥಿ ಪರಿಷತ್‍ನ್ನು ಸೈದ್ಧಾಂತಿಕವಾಗಿ ಎದುರಿಸಲಾಗದವರು ಮತ್ತು ಹೇಗಾದರೂ ಮಾಡಿ ನಮ್ಮ ಸಂಘಟನೆಯನ್ನು ಹಣಿಯಬೇಕೆಂದು ಹಂಬಲಿಸುವವರು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದಾರೆ. ಸಂಘಟನೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು  ಯತ್ನಿಸುತ್ತಿದ್ದಾರೆ. ಪ್ರಕರಣದ ಆರೋಪಿಗಳು ಎಬಿವಿಪಿ ಕಾರ್ಯಕರ್ತರು ಎಂದು ಪ್ರಚಾರ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಈ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯವಾಗಿದೆ.

ಈ ಬಗ್ಗೆ ನಾವು ಜಿಲ್ಲಾ ಎಸ್‍ಪಿಯವರನ್ನು ಭೇಟಿ ಮಾಡಿ ವಿವರಿಸಿದ್ದೇವೆ. ಸೋಷಿಯಲ್ ಮೀಡಿಯಾದಲ್ಲಿ ಅತ್ಯಾಚಾರ ಆರೋಪಿಗಳನ್ನು ಎಬಿವಿಪಿ ಕಾರ್ಯಕರ್ತರು ಎಂದು ಬಿಂಬಿಸುತ್ತಿರುವವರ ಸ್ಕ್ರೀನ್ ಶಾಟ್‍ಗಳನ್ನು ತೆಗೆದು ಪೊಲೀಸರಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಮಾಡುವ ಅಪರಾಧಿ ಚಟುವಟಿಕೆಗಳ ಹಿಂದೆ ತನಿಖೆ ನಡೆಸುತ್ತಾ ಹೋದಂತೆ ಒಂದಲ್ಲ ಒಂದು ರೀತಿಯಲ್ಲಿ ಡ್ರಗ್ಸ್ ಜಾಲಕ್ಕೆ ಅದು ಸಂಪರ್ಕ ಕಲ್ಪಿಸುವುದು ಕಂಡು ಬರುತ್ತಿದೆ. ಯುವ ಸಮುದಾಯವನ್ನು ಹಾಳುವ ಮಾಡುವ ಡ್ರಗ್ಸ್ ಜಾಲದ ವಿರುದ್ಧ ಪೊಲೀಸ್ ಇಲಾಖೆ ಕಠಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮತ್ತು ಎಬಿವಿಪಿ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ, ಹಾಗೂ ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಜುಲೈ 6ರಂದು ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ರೋಹಿಣಾಕ್ಷ ಶಿರ್ಲಾಲು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ಪುತ್ತೂರು ತಾಲೂಕು ಸಂಚಾಲಕ ಶಾಶ್ವತ್, ನಗರ ಕಾರ್ಯದರ್ಶಿ ಶಿವಪ್ರಸಾದ್, ವಿವೇಕಾನಂದ ಕಾಲೇಜು ಎಬಿವಿಪಿ ಘಟಕದ  ಅಧ್ಯಕ್ಷ ರಕ್ಷಿತ್ ಕೆದಿಲಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News