ಟೋಲ್ ಪ್ಲಾಝಾ ಸಿಬ್ಬಂದಿಯನ್ನು ಥಳಿಸಿದ ಬಿಜೆಪಿ ಸಂಸದನ ಭದ್ರತಾ ಸಿಬ್ಬಂದಿ

Update: 2019-07-06 14:44 GMT

ಲಕ್ನೊ, ಜು.6: ಬಿಜೆಪಿ ಸಂಸದ ರಾಮ್‌ಶಂಕರ್ ಕಠೇರಿಯಾರ ಭದ್ರತಾ ಸಿಬ್ಬಂದಿ ಟೋಲ್ ಪ್ಲಾಝಾದ ಸಿಬ್ಬಂದಿಯನ್ನು ಥಳಿಸಿದ ಘಟನೆ ಆಗ್ರಾದಲ್ಲಿ ಶನಿವಾರ ಬೆಳಗ್ಗೆ ನಡೆದಿದ್ದು, ಈ ಸಂಬಂಧ ಕಠೇರಿಯಾ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಮೊದಲು ಹಲ್ಲೆ ನಡೆಸಿದ್ದು ಟೋಲ್ ಸಿಬ್ಬಂದಿಗಳು. ಬಳಿಕ ಆತ್ಮರಕ್ಷಣೆಗೆ ತಾವು ಕೂಡಾ ತಿರುಗೇಟು ನೀಡಿರುವುದಾಗಿ ಕಠೇರಿಯಾ ಹೇಳಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿರುವುದು ವೀಡಿಯೊ ದೃಶ್ಯದಲ್ಲಿ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ಟೋಲ್‌ ಪ್ಲಾಝಾದ ಉದ್ಯೋಗಿಯ ಕಾಲರ್ ಹಿಡಿದಿದ್ದು ಈ ಸಂದರ್ಭ ಭದ್ರತಾ ಸಿಬ್ಬಂದಿ ಆತನನ್ನು ಒದೆಯುತ್ತಾ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಇನ್ನೊಬ್ಬ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಟೋಲ್‌ ಪ್ಲಾಝಾದವರನ್ನು ಬೆದರಿಸಿದ್ದು, ಈ ದೃಶ್ಯಾವಳಿ ವೈರಲ್ ಆಗಿದೆ. ಶನಿವಾರ ಬೆಳಿಗ್ಗೆ 3 ಗಂಟೆ ವೇಳೆಗೆ ಕಠೇರಿಯಾ ಆಗ್ರಾದಿಂದ ಇಟಾವಕ್ಕೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.

ಸಂಸದರ ಕಾರಿನ ಬೆಂಗಾವಲಿಗಿದ್ದ ಐದು ಕಾರುಗಳು ಹಾಗೂ ಒಂದು ಬಸ್ಸು ಸರತಿ ಸಾಲಿನಲ್ಲಿ ತೆರಳುವಂತೆ ಟೋಲ್‌ಫ್ಲಾಝಾದ ಸಿಬ್ಬಂದಿ ತಿಳಿಸಿದಾಗ ಆಕ್ರೋಶಗೊಂಡ ಸಂಸದರ ಭದ್ರತಾ ಸಿಬಂದಿ ಹಲ್ಲೆ ನಡೆಸಿದ್ದಾರೆ ಎಂದು ಟೋಲ್‌ಪ್ಲಾಝಾದ ಸಿಬ್ಬಂದಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News