ಮಂಗಳೂರು: ಅಕ್ರಮ ಪಡಿತರ ಸಾಗಾಟ; 130 ಚೀಲ ಪಡಿತರ ಅಕ್ಕಿ ಸಹಿತ ಸೊತ್ತು ವಶ
ಮಂಗಳೂರು, ಜು.6: ನಗರದ ಕುಲಶೇಖರದಿಂದ ಮೂಡುಬಿದರೆ ಕಡೆಗೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ವಶಕ್ಕೆ ಪಡೆದು, ಲಕ್ಷಾಂತರ ರೂ. ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಲಾರಿಯಲ್ಲಿದ್ದ ಶಿಬುದತ್ತ ಗುಡಿಯಾ, ಕಿರಣ ಗುಡಿಯಾ, ಬೀಮಲ್ ಹಜ್ದಾ, ರೋಹಿತ್ ಕುಮಾರ ಹಾಗೂ ಪಡಿತರ ಅಂಗಡಿಯ ಮಾಲಕ ಪೌಲ್ ಮೆಂಡೋನ್ಸಾ ಬಂಧಿತ ಆರೋಪಿಗಳು. ಲಾರಿ ಚಾಲಕ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಶುಕ್ರವಾರ ತಡರಾತ್ರಿ ಕುಲಶೇಖರದ ಕಲ್ಪನೆಯಿಂದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಕಂಕನಾಡಿ ನಗರ ಠಾಣೆಯ ಪೊಲೀಸರು, ಪಡಿತರ ಅಕ್ಕಿಯನ್ನು ಲಾರಿ ಸಮೇತ ಸೊತ್ತನ್ನು ವಶಕ್ಕೆ ಪಡೆದುಕೊಂಡರು.
ಲಾರಿ, ಲಾರಿಯಲ್ಲಿದ್ದ 50 ಕೆ.ಜಿ. ತೂಕದ 130 ಗೋಣಿಚೀಲದಲ್ಲಿದ್ದ ಪಡಿತರ ಅಕ್ಕಿ, 50 ಕೆ.ಜಿ. ತೂಕದ 20 ಚೀಲಗಳ ಕೋಳಿ ಆಹಾರದ ಅಕ್ಕಿ, ತೂಕ ಮಾಡುವ ಇಲೆಕ್ಟ್ರಾನಿಕ್ ಮಶೀನ್ ಸ್ವಾಧೀನಪಡಿಸಲಾಗಿದೆ. ವಶಕ್ಕೆ ಪಡೆದ ಎಲ್ಲ ಸೊತ್ತುಗಳ ಮೌಲ್ಯ 12.20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.