ಸಮಾಜದ ಶಾಂತಿ, ನೆಮ್ಮದಿಯನ್ನು ಕದಡುತ್ತಿರುವ ಸಾಮಾಜಿಕ ಮಾಧ್ಯಮಗಳು-ಶಾಸಕ ಸುನಿಲ್ ನಾಯ್ಕ

Update: 2019-07-06 17:41 GMT

ಭಟ್ಕಳ: ಲಂಗುಲಾಗಾಮು ಇಲ್ಲದ ಸಾಮಾಜಿಕ ಮಾಧ್ಯಮಗಳಿಂದಾಗಿ ಸಮಾಜದ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟಾಗುತ್ತಿದ್ದು ಮಾಧ್ಯಮಗಳು ಹಾಗೂ ಸಮಾಜಿಕ ಮಾಧ್ಯಮಗಳಿಗಿರುವ ವ್ಯತ್ಯಾಸವನ್ನು ಅರಿತುಕೊಳ್ಳಬೇಕು ಎಂದು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.

ಅವರು ಶನಿವಾರ ಇಲ್ಲಿನ ಮುರ್ಡೇಶ್ವರದ ಆರ್.ಎನ್.ಎಸ್. ಪಾಲಿಟೆಕ್ನಿಕ್ ಸಭಾಗೃಹದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನದಲ್ಲಿ ಜನರನ್ನು ಸಾಮಾಜಿಕ ಮಾಧ್ಯಮಗಳು ದಾರಿ ತಪ್ಪಿಸುತ್ತಿದೆ ಎಂದ ಅವರು ‘ಮಾಧ್ಯಮ ಕ್ಷೇತ್ರದ ಪರಿಧಿಯಲ್ಲಿ ಸಾಮಾಜಿಕ ಮಾಧ್ಯಮ ಬರುವುದಿಲ್ಲ. ಮಾಧ್ಯಮ ಎಂಬುದು ಸಮಾಜದ ಶಕ್ತಿಯಾಗಿದೆ. ಮಾಧ್ಯಮಗಳಿಗೆ ತನ್ನದೇ ಆದ ಕಟ್ಟುಪಾಡುಗಳಿದ್ದು ಸಮಾಜಿಕ ಮಾಧ್ಯಮಗಳು ಇದರಿಂದ ಹೊರತಾಗಿವೆ. ಓರ್ವ ವ್ಯಕ್ತಿ ವಾಟ್ಸಪ್ ಅಡ್ಮಿನ್ ಆಗುವುದರ ಮೂಲ ತಾನೂ ಕೂಡ ಪತ್ರಕರ್ತನೆಂದು ಹೇಳಿ ಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ಮಾಧ್ಯಮ ಸಮಾಜವನ್ನು ಒಗ್ಗೂಡಿಸುತ್ತಿದ್ದರೆ ಸಾಮಾಜಿಕ ಮಾದ್ಯಮ ಒಡೆದುಹಾಕುತ್ತಿವೆ ಎಂದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ‘ಪತ್ರಿಕೆ ವ್ಯವಸ್ಥೆ ಈ ಹಿಂದೆ ಒಂದು ಸುದ್ದಿ 4-5ದಿನದ ಬಳಿಕ ಜನರಿಗೆ ತಲುಪುತ್ತಿತ್ತು. ಆದರೆ ಈಗ ವೇಗದ ಸೋಶಿಯಲ್ ಮೀಡಿಯಾದಿಂದ ಅದು ಬದಲಾಗಿದೆ. ಸೋಶಿಯಲ್ ಮೀಡಿಯಾ ವೇಗ ಪಡೆಯಲು ಪತ್ರಿಕೆಯೇ ಮುನ್ನುಡಿಯಾಗಿದೆ. ಪತ್ರಿಕಾ ವರದಿಗಳು ಯಾವತ್ತು ಸತ್ಯವಾಗಿದ್ದಂತಹ ಕಾಲದಲ್ಲಿ ಈಗಿನ ಸೋಶಿಯಲ್ ಮೀಡಿಯಾದಲ್ಲಿನ ಸುದ್ದಿಯನ್ನು ಜನರು ತಪ್ಪು ಸರಿ ಎಂಬುದರ ಅರಿವುಮಾಡಿಕೊಳ್ಳಬೇಕು. ಪತ್ರಕರ್ತನಾದವನು ಅವನ ಸೆಳೆತ ಏನಿದ್ದರು ಸತ್ಯ ಸುದ್ದಿಯ ಕಡೆಗೆ ಇರಬೇಕು, ಸಮಾಜದ ಆರೋಗ್ಯದ ಬಗ್ಗೆ ಜವಾಬ್ದಾರಿ ಇರಬೇಕು ಎಂದು ಕರೆ ನೀಡಿದ ಅವರು ಸಮಾಜದ ತಪ್ಪು ತಿದ್ದುವುದರೊಂದಿಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ದುಡ್ಡಿನ ಬೇಡಿಕೆ ಸುದ್ದಿಯ ಬಗ್ಗೆ ದೂರವಿದ್ದು, ವೈಯಕ್ತಿಕ ಲಾಭಕ್ಕಿಂತ ಸಮಾಜದ ಲಾಭಕ್ಕಾಗಿ ಕೆಲಸ ಮಾಡಬೇಕು, ವಿಸಿಟ್ಟಿಂಗ್ ಪತ್ರಕರ್ತರಿಗಿಂತ ಉತ್ತಮ ಪತ್ರಕರ್ತರಾಗಬೇಕು ಎಂದು ಹೇಳಿದರು. 

ಹಿರಿಯ ಪತ್ರಕರ್ತ ಜಿ.ಯು.ಭಟ್ ಮಾತನಾಡಿ, ಜಿಲ್ಲೆಯ ರಾಜಕಾರಣದಲ್ಲಿ ಕಳೆದ 25ವರ್ಷಗಳಿಂದ ಖಾಯಂ ಪಟ್ಟಾಭಿಷೇಕ ಹೊಂದಿ ತಳವೂರಿ ಕುಳಿತುಕೊಂಡಂತಹ ವ್ಯಕ್ತಿಗಳು ಹೋಗಬೇಕಾದಂತಹ ಅವಶ್ಯಕತೆಯಿದೆ ಎಂದು ಪರೋಕ್ಷವಾಗಿ ನಿಷ್ಕ್ರೀಯ ಸಂಸದ ಅನಂತ್ ಕುಮರ್ ಹೆಗಡೆಯವನ್ನು ಕುಟುಕಿದ ಅವರು ಜಿಲ್ಲೆಯಲ್ಲಿ ಬದಲಾವಣೆಯ ಅವಶ್ಯಕತೆಯಿದೆ ಎಂದರು. ಉ.ಕ.ಜಿಲ್ಲೆಯ ಪತ್ರಕರ್ತರು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಬಹುತೇಕ ದೊಡ್ಡ ಪತ್ರಿಕೆಗಳಲ್ಲಿ ಉತ್ತರಕನ್ನಡದವರೇ ಪ್ರಮುಖ ಸ್ಥಾನದಲ್ಲಿದ್ದಾರೆ. ಪತ್ರಿಕೋದ್ಯಮಕ್ಕೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದರು.

ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೋಗೇರ, ಸುಭ್ರಾಯಭಟ್ ಬಕ್ಕಳ, ನರಸಿಂಹ ಸಾತೊಡ್ಡಿ, ಹ್ಯೂಮನ್ ವೆಲ್ಫೇರ್ ಸೂಸೈಟಿಯ ಅಧ್ಯಕ್ಷ ಅಮೀನುದ್ದೀನ್ ಗೌಡ ಮತ್ತಿತರರು ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕೆ.ಶ್ಯಾಮರಾವ್ ಪ್ರಶಸ್ತಿಯನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಾಯ ಭಟ್ ಬಕ್ಕಳ ಅವರಿಗೆ ಮತ್ತು ಅಜ್ಜೀಬಳ ದತ್ತಿನಿಧಿ ಪುರಸ್ಕಾರವನ್ನು ಯಲ್ಲಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ ಅವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಭಟ್ಕಳ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶಿಕ್ಷಣ ತಜ್ಞ ಎಮ್.ಬಿ.ಹೆಗಡೆ ಅವರಿಗೆ ಪತ್ರಿಕಾ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಪತ್ರಿಕಾ ವಿತರಕರಾದ ಆನಂದ ಭಟ್ ಹಾಗೂ ಮಧು ಕಾಯ್ಕಿಣಿ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು. 

ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಾಗರಿಕ  ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ನಿರೂಪಿಸಿದರು. ತಾಲೂಕಾ ಸಂಘದ ಕಾರ್ಯದರ್ಶಿ ಮೋಹನ ನಾಯ್ಕ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News