ಜಯಲಲಿತಾ ಉಡುಗೊರೆ ಪ್ರಕರಣ: ಮದ್ರಾಸ್ ಹೈಕೋರ್ಟ್ ಆದೇಶದ ಮಧ್ಯೆ ಪ್ರವೇಶಿಸಲು ಸುಪ್ರೀಂ ನಿರಾಕರಣೆ
ಹೊಸದಿಲ್ಲಿ, ಜು. 9: ಲೆಕ್ಕಾಚಾರ ರಹಿತ 2 ಕೋಟಿ ರೂಪಾಯಿಯ ಕೊಡುಗೆ ಸ್ವೀಕರಿಸಿದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಹಾಗೂ ಇತರ ಇಬ್ಬರ ವಿರುದ್ಧದ ಪ್ರಕರಣ ರದ್ದುಗೊಳಿಸಿ ಮದ್ರಾಸ್ ಉಚ್ಚ ನ್ಯಾಯಾಲಯ 2011ರಲ್ಲಿ ನೀಡಿದ ಆದೇಶದ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಮಾಜಿ ಮುಖ್ಯಮಂತ್ರಿ ಜಯಲಲಿತಾ, ಮಾಜಿ ಸಚಿವ ಅಳಗು ತಿರುನವುಕ್ಕರಸು ಹಾಗೂ ಕೆ.ಎ. ಸೆಂಗೊಟ್ಟಿಯನ್ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಇವರಲ್ಲಿ ಜಯಲಲಿತಾ ಹಾಗೂ ಅಳಗು ತಿರುವನವುಕ್ಕರುಸು ಮೃತಪಟ್ಟಿದ್ದಾರೆ. ಕೆ.ಎ. ಸೆಂಗೊಟ್ಟಿಯನ್ ಈಗಿನ ಎಐಎಡಿಎಂಕೆ ಸರಕಾರದ ಶಾಲಾ ಶಿಕ್ಷಣ ಸಚಿವರಾಗಿದ್ದಾರೆ.
ಪ್ರಕರಣದ ಮೂವರು ಆರೋಪಿಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಉಚ್ಚ ನ್ಯಾಯಾಲಯ ಗಮನಿಸುತ್ತದೆ. 2011ರ ಆದೇಶದಲ್ಲಿ ಮಧ್ಯಪ್ರವೇಶಿಸುವ ಯಾವುದೇ ಅಂಶ ಇಲ್ಲ ಎಂದು ನ್ಯಾಯಮೂರ್ತಿ ಆರ್. ಬಾನುಮತಿ ಅವರನ್ನು ಒಳಗೊಂಡ ಪೀಠ ಹೇಳಿದೆ.
ಮದ್ರಾಸ್ ಉಚ್ಚ ನ್ಯಾಯಾಲಯದ 2011ರ ಆದೇಶವನ್ನು ಸಿಬಿಐ ಪ್ರಶ್ನಿಸಿದ ಬಳಿಕ ಜಯಲಲಿತಾ ಹಾಗೂ ಇತರರಿಗೆ 2012ರಲ್ಲಿ ಸುಪ್ರೀಂ ಕೋರ್ಟ್ ನೋಟಿಸು ಜಾರಿ ಮಾಡಿತ್ತು.
ಕಾನೂನಿಗೆ ಅನುಗುಣವಾಗಿ ಉಚ್ಚ ನ್ಯಾಯಾಲಯ ವಿವಿಧ ಆಯಾಮಗಳನ್ನು ಪರಿಗಣಿಸಿಲ್ಲ ಎಂದು ಸಿಬಿಐ ಪ್ರತಿಪಾದಿಸಿತ್ತು. 1991ರಲ್ಲಿ ಲೆಕ್ಕಚಾರ ರಹಿತ 2 ಕೋಟಿ ರೂಪಾಯಿಯ ಉಡುಗೊರೆಯನ್ನು ಜಯಲಲಿತಾ ಸ್ವೀಕರಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.