×
Ad

ಆಧಾರ್ ಬಳಕೆ ಕುರಿತ ಸುಗ್ರೀವಾಜ್ಞೆ ಅಸ್ತಿತ್ವ ಕಳೆದುಕೊಂಡಿದೆ: ಕೇಂದ್ರ

Update: 2019-07-09 20:43 IST

ಹೊಸದಿಲ್ಲಿ, ಜು.9: ಖಾಸಗಿ ಕ್ಷೇತ್ರದಲ್ಲಿ ಆಧಾರ್ ಕಾರ್ಡನ್ನು ಸ್ವಯಂ ಪ್ರೇರಿತರಾಗಿ ಬಳಸಲು ಅವಕಾಶ ನೀಡುವ ಆಧಾರ್ ತಿದ್ದುಪಡಿ ಮಸೂದೆ ಸಂಸತ್‌ನಲ್ಲಿ ಅಂಗೀಕಾರಗೊಂಡಿರುವ ಕಾರಣ ಈ ಬಗ್ಗೆ ಹೊರಡಿಸಲಾಗಿದ್ದ ಸುಗ್ರೀವಾಜ್ಞೆ ಅಸ್ತಿತ್ವ ಕಳೆದುಕೊಂಡಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಕೇಂದ್ರ ತಿಳಿಸಿದೆ.

ಖಾಸಗಿ ಕ್ಷೇತ್ರದಲ್ಲಿ ಆಧಾರ್ ಕಾರ್ಡ್ ಬಳಕೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸುವ ಉದ್ದೇಶದಿಂದ ಜಾರಿ ಮಾಡಲಾದ ಸುಗ್ರೀವಾಜ್ಞೆಯ ಸಾಂವಿಧಾನಿಕ ಮೌಲ್ಯವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸುತ್ತಿದ್ದ ಮುಖ್ಯ ನ್ಯಾಯಾಧೀಶ ಡಿ.ಎನ್ ಪಟೇಲ್ ಮತ್ತು ನ್ಯಾಯಾಧೀಶ ಸಿ. ಹರಿಶಂಕರ್ ಅವರ ಪೀಠದ ಮುಂದೆ ಕೇಂದ್ರ ಸರಕಾರ ಈ ಹೇಳಿಕೆ ನೀಡಿದೆ. ಮೊಬೈಲ್ ಸಿಮ್ ಕಾರ್ಡ್ ಪಡೆಯಲು ಮತ್ತು ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಾರ್ಡನ್ನು ಗುರುತಿನ ಚೀಟಿಯಾಗಿ ಬಳಸಲು ಅವಕಾಶ ನೀಡುವ ಸುಗ್ರೀವಾಜ್ಞೆಗೆ ಮಾರ್ಚ್‌ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ತನ್ನ ಒಪ್ಪಿಗೆ ಸೂಚಿಸಿದ್ದರು.

ಜೂನ್ 24ರಂದು ಕೇಂದ್ರ ಸರಕಾರ ಈ ಸುಗ್ರೀವಾಜ್ಞೆಗೆ ಬದಲಾಗಿ ಆಧಾರ್ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ, 2019ನ್ನು ಪರಿಚಯಿಸಿತ್ತು. ಜುಲೈ 4ರಂದು ಲೋಕಸಭೆಯಲ್ಲಿ ಈ ಕಾನೂನು ಅಂಗೀಕಾರ ಪಡೆದರೆ ಜುಲೈ 8ರಂದು ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿತ್ತು.

ಆದರೆ ಈ ಮಸೂದೆಯನ್ನು ಇನ್ನೂ ಕಾನೂನಾಗಿ ಪರಿವರ್ತಿಸಲಾಗಿಲ್ಲ ಎಂದು ಮನವಿದಾರರ ಪರ ವಕೀಲರು ಆರೋಪಿಸಿದ್ದಾರೆ. ಎರಡು ಪಕ್ಷಗಳ ವಾದವನ್ನು ಆಲಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News