ಜೆಸಿಬಿ, ಹಿಟಾಚಿ ಕಳವು ಪ್ರಕರಣ: ಸೊತ್ತು ಸಹಿತ ಆರೋಪಿ ಸೆರೆ
ಮಂಗಳೂರು, ಜು.9: ಕುಪ್ಪೆಪದವು ಕಲ್ಲಿನಕೋರೆಯಲ್ಲಿ ನಿಲ್ಲಿಸಿದ್ದ ಜೆಸಿಬಿ, ಹಿಟಾಚಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕುಪ್ಪೆಪದವು ಬಸ್ ನಿಲ್ದಾಣದ ಬಳಿ ಬಂಧಿಸುವಲ್ಲಿ ಬಜ್ಪೆ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.
ಮಂಗಳೂರು ತಾಲೂಕಿನ ಮುತ್ತೂರು ನಿವಾಸಿ ಅಬ್ದುಲ್ ರಹಿಮಾನ್ (35) ಬಂಧಿತ ಆರೋಪಿ.
ಬಜ್ಪೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕುಪ್ಪೆಪದವು ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣ ವಿವರ
ಮಂಗಳೂರಿನ ದಂಬೇಲ್ ನಿವಾಸಿ ಶರತ್ ಕೆ. ಚಂದ್ರ ಎಂಬವರು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲೆಂಜಾರು ಗ್ರಾಮದ ಕುಪ್ಪೆಪದವು ಕಲ್ಲಿನಕೋರೆಯಲ್ಲಿ ಇಟ್ಟಿದ್ದ ಜೆಸಿಬಿ ಮತ್ತು ಟಾಟಾ ಹಿಟಾಚಿ ಮಷಿನ್‌ಗಳು ಚಾಲನಾ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಕೋರೆಯಲ್ಲಿಯೇ ಅವುಗಳನ್ನು ಬಿಟ್ಟಿದ್ದು, ಆಗಾಗ್ಗೆ ಹೋಗಿ ಯಂತ್ರಗಳನ್ನು ನೋಡಿ ಬರುತ್ತಿದ್ದರು. ಮೇ 19ರಂದು ಸಂಜೆ ಸುಮಾರು 5 ಗಂಟೆಗೆ ಯಂತ್ರಗಳನ್ನು ನೋಡಿದ್ದು, ಜುಲೈ 8ರಂದು ಬೆಳಗ್ಗೆ 9 ಗಂಟೆಗೆ ಹೋಗಿ ನೋಡಿದಾಗ ಅಲ್ಲಿಟ್ಟಿದ್ದ ಜೆಸಿಬಿ ಮತ್ತು ಟಾಟಾ ಹಿಟಾಚಿ ಕಾಣೆಯಾಗಿದ್ದವು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಷಿನ್‌ಗಳನ್ನು ತುಂಡರಿಸಿದ್ದರು: ಆರೋಪಿ ಅಬ್ದುಲ್ ರಹಿಮಾನ್‌ನನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ಇನ್ನು ಹಲವರು ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಜೆಸಿಬಿ ಮತ್ತು ಟಾಟಾ ಹಿಟಾಚಿ ಮಷಿನ್‌ಗಳನ್ನು ಕಳವು ಮಾಡಿ ಕತ್ತರಿಸಿ ತುಂಡರಿಸಿಕೊಂಡು ಗುಜರಿಗೆ ಮಾರಾಟ ಮಾಡಲು ಪ್ರಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ಕಳವು ಮಾಡಿದ ಜೆಸಿಬಿ ಮತ್ತು ಹಿಟಾಚಿ ಯಂತ್ರದ ತುಂಡರಿಸಿದ ಭಾಗಗಳನ್ನು ಮತ್ತು ಮಷಿನ್‌ಗಳ ಭಾಗಗಳನ್ನು ಸಾಗಿಸಲು ಉಪಯೋಗಿಸಿದ ಲಾರಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಏಳು ಲಕ್ಷ ರೂ. ಮೌಲ್ಯದ ಜೆಸಿಬಿ ಮತ್ತು ಹಿಟಾಚಿ ಯಂತ್ರದ ತುಂಡರಿಸಿದ ಭಾಗಗಳು, ಎರಡು ಲಕ್ಷ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆದೇಶದಂತೆ, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ಹಾಗೂ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಬಜ್ಪೆ ಠಾಣಾ ಪೊಲೀಸ್ ನಿರೀಕ್ಷಕ ಎಸ್.ಪರಶಿವ ಮೂರ್ತಿ, ಸಹಾಯಕ ಉಪನಿರೀಕ್ಷಕರಾದ ರಾಮಚಂದ್ರ, ಶ್ರೀರಾಮ ಪೂಜಾರಿ, ಜನಾರ್ದನ ಗೌಡ, ಎಚ್‌ಸಿಗಳಾದ ಚಂದ್ರಮೋಹನ್, ರಾಜೇಶ್, ಸುಧೀರ್, ಸಂತೋಷ್, ಹೊನ್ನಪ್ಪ ಗೌಡ, ಪಿಸಿಗಳಾದ ಕುಮಾರಸ್ವಾಮಿ, ಮಂಜುನಾಥ ನಾಯ್ಕಾ ಭಾಗವಹಿಸಿದ್ದರು.