ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
ಮಂಗಳೂರು, ಜು. 9: ಅರಬ್ಬಿ ಸಮುದ್ರದಲ್ಲಿ ಅಲೆಗಳು ಮತ್ತೆ ಆರ್ಭಟಿಸುತ್ತಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಮಂಗಳವಾರ ಸಂಜೆ 5:30ರಿಂದ ಅರಬ್ಬಿ ಸಮುದ್ರದಲ್ಲಿ 3.5ರಿಂದ 4 ಮೀಟರ್ ಎತ್ತರದ ಅಲೆಗಳು ರಭಸದಿಂದ ತೀರಕ್ಕೆ ಅಪ್ಪಳಿಸುತ್ತಿವೆ. ಕಡಲಬ್ಬರವು ಜು.11ರಂದು ತಡರಾತ್ರಿವರೆಗೂ ಮುಂದುವರಿಯಲಿದೆ. ರಾಜ್ಯದ ಕರಾವಳಿ ಮಂಗಳೂರಿನಿಂದ ಕಾರವಾರದವರೆಗೆ ಅಲೆಗಳು ಅಪಾಯಕಾರಿಯಾಗಿ ಅಪ್ಪಳಿಸುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಡಲು ಪ್ರಕ್ಷುಬ್ಧಗೊಳ್ಳಲಿದ್ದು, ನೈರುತ್ಯ ಹಾಗೂ ಅರಬ್ಬಿ ಸಮುದ್ರದ ಕೇಂದ್ರದಲ್ಲಿ 40ರಿಂದ 50 ಕಿ.ಮೀ.ವರೆಗೆ ಬಿರುಗಾಳಿ ಬೀಸಲಿದೆ. ಈ ವಾತಾವರಣವು ಜು.13ರವರೆಗೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಈ ಅವಧಿಯಲ್ಲಿ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮದ್ರದಲ್ಲಿ ಅಲೆಗಳು ಅಪಾಯಕಾರಿ ಮಟ್ಟದಲ್ಲಿ ಏಳುತ್ತಿದ್ದು, ಪರಿಣಾಮ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಹಲವು ದಿನಗಳಿಂದ ಈ ಭಾಗದಲ್ಲಿ ನಿರಂತರವಾಗಿ ಸಾಧಾರಣ ಮಳೆ ಸುರಿಯುತ್ತಿತ್ತು. ಮಂಗಳವಾರ ಬೆಳಗ್ಗೆಯೇ ಆರಂಭವಾದ ಮಳೆ ರಾತ್ರಿವರೆಗೂ ಮುಂದುವರಿದಿದೆ. ಕರಾವಳಿ ಭಾಗದಲ್ಲಿ ಮತ್ತೆ ಮಳೆಯಬ್ಬರ ಚುರುಕು ಪಡೆದಿದೆ.