×
Ad

‘ತಂಬಾಕು ಕಂಪೆನಿಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಡಿ’

Update: 2019-07-09 21:45 IST

ಉಡುಪಿ, ಜು. 9: ಸರಕಾರಿ ಇಲಾಖೆಗಳು, ತಂಬಾಕು ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಕಂಪೆನಿಗಳೊಂದಿಗೆ ಯಾವುದೇ ಸಮಾರಂಭದ ಆಯೋಜನೆ, ಅವರ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು, ಅವರು ನೀಡುವ ಅನುದಾನ, ಪರಿಕರಗಳನ್ನು ಯಾವುದೇ ಇಲಾಖೆಗಳು ಪಡೆಯಬಾರದು. ಇದು ವಿಶ್ವ ಆರೋಗ್ಯ ಸಂಸ್ಥೆಯ ಎಫ್‌ಸಿಟಿಸಿ ನಿಯಮದ ಉಲ್ಲಂಘನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಜಿಲ್ಲಾ ತಂಬಾಕು ನಿಷೇಧ ಕೋಶ ಇವುಗಳ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡು ತಿದ್ದರು.

ತಂಬಾಕು ಕಂಪೆನಿಗಳು ತಮ್ಮ ಉತ್ಪನ್ನಗಳ ಪ್ರಚಾರದ ಉದ್ದೇಶದಿಂದ, ಸರಕಾರಿ ಸಂಸ್ಥೆಗಳೊಂದಿಗೆ ಸೇರಿ ಕಾರ್ಯಕ್ರಮಗಳ ಆಯೋಜಿಸುವ ಸಾಧ್ಯತೆಯಿದ್ದು, ಇದರಿಂದ ತಂಬಾಕು ಉತ್ಪನ್ನಗಳ ಬಳಕೆಗೆ ನಾವೇ ಸಹಕಾರ ನೀಡಿದಂತಾಗುತ್ತದೆ. ಆದ್ದರಿಂದ ಎಲ್ಲಾ ಇಲಾಖೆಗಳು ತಂಬಾಕು ಉತ್ಪನ್ನಗಳ ತಯಾರಿಕಾ ಮತ್ತು ಮಾರಾಟ ಸಂಸ್ಥೆಗಳಿಗೆ ಯಾವುದೇ ರೀತಿಯಲ್ಲಿ ನೆರವು ಅಥವಾ ಸಹಕಾರ ನೀಡದಂತೆ ಜಿಲ್ಲಾಧಿಕಾರಿ ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಎಫ್‌ಸಿಟಿಸಿ ನಿಯಮಗಳ ಕುರಿತಂತೆ ಎಲ್ಲಾ ಕಚೇರಿಗಳಲ್ಲಿ ಸೂಕ್ತಫಲಕಗಳನ್ನು ಅಳವಡಿಸು ವಂತೆ ಸೂಚಿಸಿ, ಈ ಫಲಕಗಳನ್ನು ಆರೋಗ್ಯ ಇಲಾಖೆ ಮೂಲಕ ಪಡೆಯುವಂತೆ ತಿಳಿಸಿದರು.

ಶಾಲಾ ಕಾಲೇಜುಗಳಲ್ಲಿ, ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಮುಖ್ಯ ಕೇಂದ್ರವಾಗಿರಿಸಿಕೊಂಡು ಪ್ರತಿವರ್ಷ ಜಾಗೃತಿ ಮೂಡಿಸುವ ಕೆಲಸ ಮಾಡುವುದರೊಂದಿಗೆ ಶಾಲಾ ಕಾಲೇಜು ವತಿಯಿಂದ ಜಾಗೃತಿ ಮೂಡಿಸುವ ಸಲುವಾಗಿ ತಂಬಾಕು ನಿಷೇಧ ಸಮಿತಿ ರಚಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ತಿಳಿಸಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದ ವತಿಯಿಂದ ಉಡುಪಿ ಜಿಲ್ಲೆಯ ಕಾಪು ಮತ್ತು ಮಲ್ಪೆ ಸಮುದ್ರ ತೀರದಲ್ಲಿ ಧೂಮಪಾನ ಮುಕ್ತ ಸಮುದ್ರ ತೀರ ಎಂಬ ನಾಮಪಲಕಗಳನ್ನು ಅಳವಡಿಸಲಾಗಿದೆ. ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಜಿಲ್ಲೆಯಾದ್ಯಂತ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೋಟ್ಪಾ ನಿಯಂತ್ರಣ ತನಿಖಾ ದಳದಿಂದ ಎಪ್ರಿಲ್ 2019ರಿಂದ ಜೂನ್‌ವರೆಗೆ ಒಟ್ಟು 426 ಪ್ರಕರಣ ದಾಖಲಿಸಿ 45,550 ರೂ ದಂಡ ವಸೂಲಿ ಮಾಡಲಾಗಿದೆ ಎಂದು ಡಾ. ವಾಸುದೇವ ತಿಳಿಸಿದರು.

ಬೀಡಿ ಕಟ್ಟುವವರಿಗೆ ಉದ್ಯೋಗ: ಕೆಎಂಸಿ ಮಣಿಪಾಲ ಸಮುದಾಯ ವೈದ್ಯಕೀಯ ಆರೋಗ್ಯ ವಿಭಾಗದಿಂದ ಜಿಲ್ಲೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದ 2018-19 ಸಾಲಿನ ಬೇಸ್‌ಲೈನ್ ಎಂಡ್‌ ಲೈನ್ ಸರ್ವೇ ಮಾಡಿದ್ದು, ಇದರಂತೆ ಉಡುಪಿ ಜಿಲ್ಲೆಯಲ್ಲಿ ಸುಮಾರು 1.20 ಲಕ್ಷ ಮಂದಿ ಬೀಡಿ ಉದ್ಯಮದಲ್ಲಿ ತೊಡಗಿದ್ದು, ಅವರಿಗೆ ಬೇರೆ ಉದ್ಯೋಗಾವಕಾಶ ಅಥವಾ ಜೀವನ ನಿರ್ವಹಣೆಗೆ ಸೂಕ್ತ ತರಬೇತಿ ನೀಡಿದಲ್ಲಿ ಶೇ.25 ಮಂದಿ ಬೀಡಿ ಕೆಲಸ ಬಿಡಲು ಸಿದ್ದರಿದ್ದಾರೆ ಎಂದು ಕೆಎಂಸಿ ಮಣಿಪಾಲದ ವೈದ್ಯಕೀಯ ಆರೋಗ್ಯ ವಿಭಾಗದ ಡಾ.ಮುರಳೀಧರ್ ಕುಲಕರ್ಣಿ ತಿಳಿಸಿದರು.

ಜಿಲ್ಲೆಯಲ್ಲಿ 2 ಕಡೆಗಳಲ್ಲಿ ಇ-ಸಿಗರೇಟ್ ಮಾರಾಟ ಕಂಡುಬಂದಿದೆ. ಸರಕಾರ ಇ-ಸಿಗರೇಟ್ ಬ್ಯಾನ್ ಮಾಡಿದ್ದರೂ ಸಹ ಕೆಲವು ಆನ್‌ಲೈನ್ ಸೈಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇ-ಸಿಗರೇಟ್ ಸೇವನೆ ಕಾಲೇಜು ವಿದ್ಯಾರ್ಥಿ ಗಳಲ್ಲೇ ಅಧಿಕ. ಹಲವೆಡೆಗಳಲ್ಲಿ ಬೀಡಿ ಸಿಗರೇಟ್ ಮಾರಾಟ ಮಾಡುತಿದ್ದು, ಇದರಿಂದ ಸಿಗರೇಟ್ ಪ್ಯಾಕ್ ಮೇಲಿರುವ ತಂಬಾಕು ದುಷ್ಪರಿಣಾಮ ಕುರಿತ ಮಾಹಿತಿ ಹಾಗೂ ಕ್ವಿಟ್‌ಲೈನ್ ಸಂಖ್ಯೆ ಬಗ್ಗೆ ಬಳಕೆದಾರರಿಗೆ ಮಾಹಿತಿ ದೊರೆಯುತ್ತಿಲ್ಲ ಎಂದು ಡಾ.ಕುಲಕರ್ಣಿ ವಿವರಿಸಿದರು.

ಜಿಲ್ಲೆಯಲ್ಲಿ 2 ಕಡೆಗಳಲ್ಲಿ ಇ-ಸಿಗರೇಟ್ ಮಾರಾಟ ಕಂಡುಬಂದಿದೆ. ಸರಕಾರ ಇ-ಸಿಗರೇಟ್ ಬ್ಯಾನ್ ಮಾಡಿದ್ದರೂ ಸಹ ಕೆಲವು ಆನ್‌ಲೈನ್ ಸೈಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇ-ಸಿಗರೇಟ್ ಸೇವನೆ ಕಾಲೇಜು ವಿದ್ಯಾರ್ಥಿ ಗಳಲ್ಲೇ ಅಧಿಕ. ಹಲವೆಡೆಗಳಲ್ಲಿ ಬೀಡಿ ಸಿಗರೇಟ್ ಮಾರಾಟ ಮಾಡುತಿದ್ದು, ಇದರಿಂದ ಸಿಗರೇಟ್ ಪ್ಯಾಕ್ ಮೇಲಿರುವ ತಂಬಾಕು ದುಷ್ಪರಿಣಾಮ ಕುರಿತ ಮಾಹಿತಿ ಹಾಗೂ ಕ್ವಿಟ್‌ಲೈನ್ ಸಂಖ್ಯೆ ಬಗ್ಗೆ ಬಳಕೆದಾರರಿಗೆ ಮಾಹಿತಿ ದೊರೆಯುತ್ತಿಲ್ಲ ಎಂದು ಡಾ.ಕುಲಕರ್ಣಿ ವಿವರಿಸಿದರು.

ಇ-ಸಿಗರೇಟ್ ಮಾರಾಟಕ್ಕೆ ಸಂಬಂದಿಸಿದಂತೆ ಆನ್‌ಲೈನ್ ಕಂಪೆನಿಗಳ ವಿರುದ್ದ ಕ್ರಮಕೈಗೊಳ್ಳುವ ಕುರಿತಂತೆ ಆರೋಗ್ಯ ಇಲಾಖೆಯ ಆಯುಕ್ತರೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಹೆಪ್ಸಿಬಾ ರಾಣಿ, ತಂಬಾಕು ನಿಯಂತ್ರಣ ದಾಳಿ ಸಂದಭರ್ದಲ್ಲಿ ಬೀಡಿ ಸಿಗರೇಟ್ ಮಾರಾಟದ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಎಎಸ್ಪಿ ಕುಮಾರಚಂದ್ರ, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಸರ್ಜನ್ ಡಾ. ಮಧುಸೂದನ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News