×
Ad

ಕಲುಷಿತ ಐಸ್‌ಕ್ಯಾಂಡಿ ಪ್ರಕರಣ: ಕ್ರಮಕ್ಕೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

Update: 2019-07-09 21:48 IST

ಉಡುಪಿ, ಜು.9: ಇತ್ತೀಚೆಗೆ ಜಿಲ್ಲೆಯಲ್ಲಿ ಕಲುಷಿತ ಐಸ್‌ಕ್ಯಾಂಡಿ ಸೇವಿಸಿ ಮಕ್ಕಳು ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಆಹಾರ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಆಹಾರ ಸುರಕ್ಷತಾ ಸೆಯಅ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯಲ್ಲಿ ಕಲುಷಿತ ನೀರಿನಿಂದ ತಯಾರಿಸಿದ ಐಸ್‌ಕ್ಯಾಂಡಿ ಸೇವಿಸಿ ಸುಮಾರು 78 ಮಕ್ಕಳು ಅಸ್ವಸ್ಥಗೊಂಡಿದ್ದು, ಈ ಕುರಿತಂತೆ ಐಸ್‌ಕ್ಯಾಂಡಿ ತಯಾರಿಕರ ವಿರುದ್ದ ಇದುವರೆಗೆ ಸೂಕ್ತ ಕ್ರಮಕೈಗೊಳ್ಳದ ಕುರಿತು ತಮ್ಮ ಅಸಮಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಈ ಕುರಿತಂತೆ ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಿ. ಇದರಿಂದ ಕಲುಷಿತ ಆಹಾರ ಉತ್ಪನ್ನ ತಯಾರಿಕರಿಗೆ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಹಾರ ತಯಾರಿಕಾ ಘಟಕಗಳಿಗೆ ಸುರಕ್ಷತಾ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ, ಅಲ್ಲಿನ ಶುಚಿತ್ವ ಸೇರಿದಂತೆ ಆಹಾರ ತಯಾರಿಕೆಗೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಕುರಿತು ಪ್ರತಿ ತಿಂಗಳು ವೇಳಾಪಟ್ಟಿ ಸಿದ್ದಪಡಿಸಿಕೊಂಡು ಕಾರ್ಯ ನಿರ್ವಹಿಸಿ ಎಂದ ಹೆಪ್ಸಿಬಾ ರಾಣಿ, ಜಿಲ್ಲೆಯ ಪ್ರವಾಸಿ ತಾಣಗಳು ಮತ್ತು ಬೀಚ್ ಪ್ರದೇಶದಲ್ಲಿನ ಗೂಡಂಗಡಿಗಳಲ್ಲಿ ತಯಾರಿಸುವ ಆಹಾರದ ಗುಣಮಟ್ಟ ಪರಿಶೀಲಿಸಿ. ಅಲ್ಲಿ ಐಸ್‌ಕ್ರೀಂ ಹಾಗೂ ಇತರೆ ಆಹಾರ ಸ್ವೀಕರಿಸಲು ಪ್ಲಾಸ್ಟಿಕ್ ಚಮಚ ಮತ್ತು ಇತರೆ ಪ್ಲಾಸ್ಟಿಕ್ ಉತ್ಪನ್ನ ಗಳನ್ನು ಬಳಸುತ್ತಿರುವ ಕುರಿತಂತೆ ದೂರುಗಳಿದ್ದು, ಸಂಬಂದಪಟ್ಟ ನಗರಸಬೆ ಮತ್ತು ಪುರಸಭೆ ಅಧಿಕಾರಿಗಳು, ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.

ಜಿಲ್ಲೆಯ ಮೀನುಗಳಲ್ಲಿ ಫಾರ್ಮಾಲಿನ್ ಸಿಂಪಡಣೆ ಕುರಿತಂತೆ ಪರಿಶೀಲಿ ಸಲಾಗಿ ನೆಗೆಟಿವ್ ವರದಿ ಬಂದಿದೆ. 68 ಮೀನು ಸಾಗಾಟ ವಾಹನಗಳಿಗೆ ಆಹಾರ ಸುರಕ್ಷತಾ ಪರವಾನಗಿ ನೀಡಲಾಗಿದೆ. ಜಿಲ್ಲೆಯಲ್ಲಿ 15 ಕುಡಿಯುವ ನೀರು ಘಟಕಗಳಿದ್ದು, ಯಾವುದೇ ಅನಧಿಕೃತ ಘಟಕಗಳು ಇಲ್ಲ ಎಂದು ಜಿಲ್ಲಾ ಸವೇಕ್ಷಣಾಧಿಕಾರಿ ಡಾ. ವಾಸುದೇವ್ ಮಾಹಿತಿ ನೀಡಿದರು.

ಸಭೆಯಲ್ಲಿ ಎಎಸ್ಪಿಕುಮಾರಚಂದ್ರ, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News