ಉಡುಪಿಯ ಒಂಟಿ ವೃದ್ಧೆ ಕೊಲೆ: ಆರೋಪಿಗಳು ಗೋವಾದಲ್ಲಿ ವಶಕ್ಕೆ ?
ಉಡುಪಿ, ಜು.9: ನಗರದ ಸುಬ್ರಹ್ಮಣ್ಯ ನಗರದ 5ನೇ ಕ್ರಾಸ್‌ನ ಮನೆ ಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ರತ್ನಾವತಿ ಜಿ. ಶೆಟ್ಟಿ (80) ಎಂಬವರನ್ನು ಕೊಂದು ಚಿನ್ನಾಭರಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಗೋವಾದಲ್ಲಿ ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಧಾರವಾಡ ಜಿಲ್ಲೆಯ ನರಗುಂದದ ಅಮ್ರಿಶ್ ಬಸಪ್ಪ ಜಾದರ್ (30) ಹಾಗೂ ರಶೀದಾ ಅಬ್ದುಲ್ (26) ಎಂಬವವರನ್ನು ಜಿಲ್ಲಾ ಪೊಲೀಸರು ಕೊಟ್ಟ ಮಾಹಿತಿ ಮೇರೆಗೆ ಪಣಜಿ ಸಮೀಪದ ಓಲ್ಡ್ ಗೋವಾ ಪೊಲೀಸ್ ಠಾಣಾ ವ್ಯಾಪ್ತಿಯ ಸೈಂಟ್‌ಕ್ರೂಝ್ ಗ್ರಾಮದಲ್ಲಿ ಇನ್‌ಸ್ಪೆಕ್ಟರ್ ಜೆ.ದಲ್ವಿ ನೇತೃತ್ವದ ಪೊಲೀಸ್ ತಂಡ ಮಂಗಳವಾರ ಬಂಧಿಸಿದೆ ಎಂದು ತಿಳಿದುಬಂದಿದೆ.
ಹಿರಿಯ ನಾಗರಿಕರು, ವೃದ್ಧರು ಮಾತ್ರ ಇರುವಲ್ಲಿ ಮನೆಯನ್ನು ಬಾಡಿಗೆಗೆ ಪಡೆದು ಅವರ ವಿಶ್ವಾಸ ಸಂಪಾದಿಸಿ ಮನೆಯಲ್ಲಿರುವ ಬೆಲೆಬಾಳುವ ಸೊತ್ತುಗಳನ್ನು ದೋಚುವುದು ಇವರ ಹವ್ಯಾಸವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಗೋವಾದಲ್ಲಿ ತಲೆಮರೆಸಿ ಕೊಂಡಿರುವ ಮಾಹಿತಿಯ ಮೇರೆಗೆ ಅವರ ಪೋಟೊ ಹಾಗೂ ಮೊಬೈಲ್ ಕಾಲ್ ದಾಖಲೆ ಗಳ ಆಧಾರದಲ್ಲಿ ಅವರಿಬ್ಬರ ಇರವನ್ನು ಪತ್ತೆ ಹಚ್ಚಲಾಗಿದೆ ಎಂದು ದಲ್ವಿ ಅವರು ಪಣಜಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಪೊಲೀಸರು ಗೋವಾಕ್ಕೆ ತೆರಳಿದ್ದು, ಆರೋಪಿಗಳನ್ನು ಬುಧವಾರ ಕರೆತರುವ ಸಾಧ್ಯತೆ ಇದೆ. ಈ ಬಗ್ಗೆ ಜಿಲ್ಲೆಯ ಪೊಲೀಸರು ಅಧಿಕೃತವಾಗಿ ಖಚಿತ ಪಡಿಸಿಲ್ಲ. ಜು. 2ರ ಅಪರಾಹ್ನ 3 ಗಂಟೆಯಿಂದ ಜು. 5ರ ರಾತ್ರಿ 8:30ರ ನಡುವೆ ರತ್ನಾವತಿ ಅವರ ಕೊಲೆ ನಡೆದಿದ್ದು, ಶುಕ್ರವಾರ ತಡರಾತ್ರಿ ಕೃತ್ಯ ಬೆಳಕಿಗೆ ಬಂದಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ನಿಶಾ ಜೇಮ್ಸ್ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದು, ಆರೋಪಿಗಳ ಬೆನ್ನತ್ತಿದ್ದರು.