ಶಾರ್ಜಾದ ಪ್ರಥಮ ‘ಗೋಲ್ಡನ್ ಕಾರ್ಡ್’ ಭಾರತೀಯ ಉದ್ಯಮಿಗೆ
ಶಾರ್ಜಾ (ಯುಎಇ), ಜು. 9: ಹೂಡಿಕೆದಾರರಿಗೆ ಅನ್ವಯವಾಗುವ ಖಾಯಂ ವಾಸ್ತವ್ಯ ಯೋಜನೆಯ ಭಾಗವಾಗಿ, ಶಾರ್ಜಾದ ಪ್ರಥಮ ‘ಗೋಲ್ಡನ್ ಕಾರ್ಡ್’ ವೀಸಾವನ್ನು ಸೋಮವಾರ ಭಾರತೀಯ ವಲಸಿಗ ಉದ್ಯಮಿ ಲಲು ಸ್ಯಾಮುಯೆಲ್‌ಗೆ ನೀಡಲಾಗಿದೆ.
ಲಲು ಸಾಮುಯೆಲ್ ಕಿಂಗ್ಸ್‌ಟನ್ ಹೋಲ್ಡಿಂಗ್ಸ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಹಾಗೂ ಶಾರ್ಜಾ ಇಂಡಸ್ಟ್ರಿ ಬಿಝ್ನೆಸ್ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ.
ಗೋಲ್ಡನ್ ಕಾರ್ಡ್ 10 ವರ್ಷ ಅವಧಿಯ ವೀಸಾವಾಗಿದೆ. ಇದಕ್ಕೆ ಹೂಡಿಕೆದಾರರು ಮತ್ತು ಉದ್ಯಮಿಗಳು ಅರ್ಹರಾಗುತ್ತಾರೆ. ಇದು ಬಂಡವಾಳ ಹಾಗೂ ಅಂತರ್‌ರಾಷ್ಟ್ರೀಯ ಪರಿಣತರು ಸೇರಿದಂತೆ ಪ್ರಮುಖ ಕಂಪೆನಿಗಳ ಮಾಲೀಕರನ್ನು ಹಾಗೂ ರಾಷ್ಟ್ರೀಯ ಆರ್ಥಿಕತೆಯ ಎಲ್ಲ ಪ್ರಮುಖ ಕ್ಷೇತ್ರಗಳ ವೃತ್ತಿಪರರು, ವೈಜ್ಞಾನಿಕ ಕ್ಷೇತ್ರಗಳ ಸಂಶೋಧಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾರ್ಜಾದತ್ತ ಆಕರ್ಷಿಸುವ ಉದ್ದೇಶವನ್ನು ಹೊಂದಿದೆ.
ಯುಎಇಯ ಪುನಶ್ಚೇತನ ಮತ್ತು ಅಭಿವೃದ್ಧಿಯಲ್ಲಿ ಅವರನ್ನು ತೊಡಗಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಗೋಲ್ಡನ್ ಕಾರ್ಡ್ ವೀಸಾ ಹೊಂದಿದವರು ಮತ್ತು ಅವರ ಕುಟುಂಬ ಸದಸ್ಯರು ಪ್ರಾಯೋಜಕರಿಲ್ಲದೆ ವಾಸ್ತವ್ಯ ವೀಸಾ ಪಡೆಯುವುದು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಪಡೆಯುತ್ತಾರೆ.