×
Ad

ತೆರೇಸಾ ಮೇ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ ಟ್ರಂಪ್

Update: 2019-07-09 22:49 IST

  ವಾಶಿಂಗ್ಟನ್, ಜು. 9: ತನ್ನನ್ನು ಮತ್ತು ತನ್ನ ಆಡಳಿತವನ್ನು ತೀವ್ರವಾಗಿ ಟೀಕಿಸುವ ಬ್ರಿಟನ್ ರಾಯಭಾರಿಯ ಗುಪ್ತ ಟಿಪ್ಪಣಿಯೊಂದು ಸೋರಿಕೆಯಾದ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬ್ರಿಟನ್‌ನ ನಿರ್ಗಮನ ಪ್ರಧಾನಿ ತೆರೇಸಾ ಮೇ ವಿರುದ್ಧ ಅಸಾಧಾರಣ ವಾಗ್ದಾಳಿ ನಡೆಸಿದ್ದಾರೆ.

ಅದೇ ವೇಳೆ, ಕಳೆದ ವಾರಾಂತ್ಯದಲ್ಲಿ ಗುಪ್ತ ಟಿಪ್ಪಣಿ ಸೋರಿಕೆಯಾದ ಬಳಿಕ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಲು ಬ್ರಿಟನ್ ಪರದಾಡುತ್ತಿದೆ.

ಡೊನಾಲ್ಡ್ ಟ್ರಂಪ್ ‘ಅಸಮರ್ಥ’ ಹಾಗೂ ಅವರ ಶ್ವೇತಭವನ ‘ನಿಷ್ಕ್ರಿಯವಾಗಿದೆ’ ಎಂಬುದಾಗಿ ಅಮೆರಿಕಕ್ಕೆ ಬ್ರಿಟನ್‌ನ ರಾಯಭಾರಿ ಕಿಮ್ ಡರೋಚ್ ತನ್ನ ಟಿಪ್ಪಣಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ತನ್ನ ರಾಯಭಾರಿಗೆ ಬ್ರಿಟನ್ ಪ್ರಧಾನಿ ಮೇ ಬೆಂಬಲ ನೀಡುತ್ತಿರುವುದನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಟ್ರಂಪ್, ‘ಬ್ರೆಕ್ಸಿಟ್’ನ್ನು ತೆರೇಸಾ ಮೇ ನಿಭಾಯಿಸುತ್ತಿರುವ ರೀತಿಯನ್ನು ಟೀಕಿಸಿದ್ದಾರೆ ಹಾಗೂ ಅವರು ಶೀಘ್ರದಲ್ಲಿಯೇ ಅಧಿಕಾರದಿಂದ ಇಳಿಯುತ್ತಿರುವುದನ್ನು ಸ್ವಾಗತಿಸಿದ್ದಾರೆ.

‘‘ಅವರು (ತೆರೇಸಾ) ಮತ್ತು ಅವರ ಪ್ರತಿನಿಧಿಗಳು ಎಂಥ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ’’ ಎಂಬುದಾಗಿ ಸರಣಿ ಟ್ವೀಟ್‌ಗಳಲ್ಲಿ ಟ್ರಂಪ್ ಕಿಡಿಗಾರಿದ್ದಾರೆ.

‘‘ಅದನ್ನು ಯಾವ ರೀತಿ ಮಾಡಬೇಕು ಎಂಬುದಾಗಿ ನಾನು ಅವರಿಗೆ ಹೇಳಿದ್ದೇನೆ, ಆದರೆ ಅವರು ಅದನ್ನು ಬೇರೆ ರೀತಿಯಲ್ಲಿ ಮಾಡಲು ನಿರ್ಧರಿಸಿದ್ದಾರೆ’’ ಎಂದರು.

‘‘ಸುಂದರ ಬ್ರಿಟನ್‌ಗೆ ಕಾದಿರುವ ಶುಭ ಸುದ್ದಿಯೆಂದರೆ, ಅವರು ಶೀಘ್ರದಲ್ಲೇ ನೂತನ ಪ್ರಧಾನಿಯನ್ನು ಹೊಂದಲಿದ್ದಾರೆ’’ ಎಂದು ಟ್ರಂಪ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News