ಸಿಎಂ ಕುಮಾರಸ್ವಾಮಿ ರಾಜೀನಾಮೆಗೆ ಬಿಜೆಪಿ ಒತ್ತಾಯ: ದ.ಕ. ಜಿಲ್ಲಾ ಘಟಕದಿಂದ ಪ್ರತಿಭಟನೆ

Update: 2019-07-09 17:24 GMT

ಮಂಗಳೂರು, ಜು.9: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಯಿಂದ ಸಮ್ಮಿಶ್ರ ಸರಕಾರ ಬಹುಮತ ಕಳೆದುಕೊಂಡಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ದ.ಕ. ಜಿಲ್ಲಾ ಘಟಕದಿಂದ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ರಾಜ್ಯದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಜನರು ತೀರ್ಪು ನೀಡಿದ್ದರು. ಬಿಜೆಪಿ 104 ಸ್ಥಾನ ಪಡೆಯುವ ಜತೆಗೆ ಅತಿಹೆಚ್ಚು ಮತ ಗಳಿಸಿತ್ತು. ಕಾಂಗ್ರೆಸ್ ವಿರುದ್ಧ ಜನಾದೇಶವಿದ್ದರೂ, ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಬಾರದು ಎಂಬ ದೃಷ್ಟಿಯಿಂದ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದವು. ಆದರೆ, ಅಭಿವೃದ್ಧಿ ಕೆಲಸ ಮಾಡುವ ಬದಲಿಗೆ ಜನರ ಹಣವನ್ನು ಲೂಟಿ ಮಾಡಲು ಸಮ್ಮಿಶ್ರ ಸರಕಾರವನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಸಮ್ಮಿಶ್ರ ಸರಕಾರದ ವಿರುದ್ಧ ಕಾಂಗ್ರೆಸ್-ಜೆಡಿಎಸ್‌ನ ಶಾಸಕರೇ ಧ್ವನಿ ಎತ್ತಿ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರಿಗೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಇಲ್ಲ. ತಕ್ಷಣ ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ವಿಧಾನಸಭೆ ಮಾಜಿ ಉಪಸ್ಪೀಕರ್ ಎನ್.ಯೋಗೀಶ್ ಭಟ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಮೂಡುಬಿದಿರೆ ಮಾತನಾಡಿದರು.

ದ.ಕ. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ನಿತಿನ್‌ಕುಮಾರ್, ರವಿಶಂಕರ ಮಿಜಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಪ್ರಮುಖರಾದ ಸಂತೋಷ್ ಕುಮಾರ್ ಬೋಳಿಯಾರ್, ಈಶ್ವರ ಕಟೀಲು, ರೂಪಾ ಬಂಗೇರ, ಪ್ರೇಮಾನಂದ ಶೆಟ್ಟಿ, ಭಾಸ್ಕರಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News