ಬೆಳಪು: ಕಸ ಹಾಕಲು ಬಂದ ವಾಹನ ಮುಟ್ಟುಗೋಲು

Update: 2019-07-09 17:31 GMT

ಪಡುಬಿದ್ರಿ: ಕಸದ ಎಸೆಯಲು ಬಂದಿರುವ ಟೆಂಪೋವನ್ನು ಖಚಿತ ಮಾಹಿತಿ ಪಡೆದು ದಂಡ ವಿಧಿಸಿ ಮುಟ್ಟುಗೋಲು ಹಾಕಿದ್ದು, ಮಾಹಿತಿದಾರನಿಗೆ ಬಹುಮಾನ ನೀಡಿದ ಘಟನೆ ಬೆಳಪುವಿನಲ್ಲಿ ನಡೆದಿದೆ.

ಬೆಳಪು ಗ್ರಾಮದಲ್ಲಿ ರಸ್ತೆ ಬದಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದನ್ನು ನಿಷೇಧಿಸಿದ್ದು, ಕಸ ಎಸೆದರೆ ರೂ.2,000 ದಂಡ ಮಾಹಿತಿದಾರನಿಗೆ ರೂ. 1,000 ಬಹುಮಾನ ಘೋಷಿಸಲಾಗಿತ್ತು.  "ನಮ್ಮ ಗ್ರಾಮ ಸ್ವಚ್ಛವಾಗಿರಲಿ" ಎಂಬ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಲಾಗಿದ್ದು ಇದನ್ನು ಅನುಷ್ಟಾನಗೊಳಿಸಲಾಗುತ್ತಿದೆ. ರಾತ್ರಿ ಗಸ್ತು, ಅಲ್ಲಲ್ಲಿ ಸಿ.ಸಿ. ಟಿ.ವಿಗಳನ್ನು ಜೋಡಿಸಲಾಗಿದೆ. ಎಲ್ಲಾ  ಮುಂಜಾಗ್ರತಾ ಕ್ರಮವನ್ನು ಲೆಕ್ಕಿಸದೆ ಬೇರೆ ಗ್ರಾಮದವರು ಬೆಳಪುವಿಗೆ ಬಂದು ಕಸ ಎಸೆದು ಹೋಗುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಬಗ್ಗೆ ಮಾಹಿತಿ ನೀಡಲಾಗಿತ್ತು.

ಕಳದ ರಾತ್ರಿ ಕಸ ಎಸೆಯುವ ಬಗ್ಗೆ ಸ್ಥಳೀಯರೊಬ್ಬರ ಮಾಹಿತಿಯಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಸ ಎಸೆದ ಟೆಂಪೋವನ್ನು ಮುಟ್ಟುಗೋಲು ಹಾಕಿದರು. ಬಳಿಕ ಅವರಲ್ಲಿ ಮುಚ್ಚಳಿಕೆ ಬರೆಸಿಕೊಂಡು ರೂ.2 ಸಾವಿರ ದಂಡ ವಿಧಿಸಲಾಯಿತು. ಅಲ್ಲದೆ ಮಾಹಿತಿದಾರರಿಗೆ ರೂ.  1 ಸಾವಿರ ಬಹುಮಾನವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನೀಡಲಾಯಿತು.

ಸ್ವಚ್ಚತೆ ಬಗ್ಗೆ ರಾಜಿ ಇಲ್ಲ :  ಬೆಳಪು ಗ್ರಾಮದಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಗ್ರಾಮವನ್ನು ಸ್ವಚ್ಚವಾಗಿಸುವುದು ಪ್ರತಿಯೊಬ್ಬ ಗ್ರಾಮಸ್ಥನ ಕರ್ತವ್ಯ. ಜನಜಾಗೃತಿಗಾಗಿ ಹಲವಾರು ಮಾಹಿತಿಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ಕಸ ರಸ್ತೆಯಲ್ಲಿ ಎಸೆಯುವುದನ್ನು ಪಂಚಾಯತ್ ಗಂಭೀರ ಅಪರಾಧವೆಂದು ಪರಿಗಣಿಸುತ್ತದೆ. ಮೊದಲು ದಂಡ, ನಂತರ  ಪೋಲೀಸ್ ಠಾಣೆಯಲ್ಲಿ ದೂರು ದಾಖಲು, ತಪ್ಪಿದಲ್ಲಿ ಪಂಚಾಯತ್ ಸವಲತ್ತುಗಳಿಗೆ ಕತ್ತರಿ, ಇದೆಲ್ಲಾ ನಿಮ್ಮ ಗ್ರಾಮದ ಸ್ವಚ್ಚತೆಗಾಗಿ ನಿಮ್ಮ ಮಕ್ಕಳ ಆರೋಗ್ಯಕ್ಕಾಗಿ ಎಂದು ಪಂಚಾಯತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News