ಬೆಳ್ತಂಗಡಿ: 'ಜಲ ಮರುಪೂರಣ ಅಭಿಯಾನ' ಜೀವ ಜಲದ ಮೂಲ ಉಳಿಸುವ ಕಾರ್ಯಕ್ರಮ

Update: 2019-07-09 17:48 GMT

ಬೆಳ್ತಂಗಡಿ: ಪರಿಸರ ರಕ್ಷಣೆ, ಮಿತಿವಾದ ನೀರಿನ ಬಳಕೆ, ನೀರಿಂಗಿಸುವಿಕೆ ಬಗ್ಗೆ ಜನರ ಮನಸ್ಸಿಗೆ ಮನವರಿಕೆ ಮಾಡುವ ಅಗತ್ಯವಿದ್ದು ಇಂದಿನ ಜಲಮರುಪೂರಣ ಅಭಿಯಾನವು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯುವುದರಿಂದ ಇದು ಯಶಸ್ವಿಯಾಗುತ್ತದೆ. ಮುಂದಿನ ಪೀಳಿಗೆಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕಾದರೆ ಜೀವ ಜಲ ಉಳಿಸುವ ಕಾರ್ಯ ಮಾಡಬೇಕು ಎಂದು ದ.ಕ ಜಿಲ್ಲಾಧಿಕಾರಿ ಸಿ. ಸಸಿಕಾಂತ್ ಸಿಂಥಿಲ್ ಕರೆನೀಡಿದರು.

ಅವರು ಮಂಗಳವಾರ ಗುರುವಾಯನಕೆರೆ ಜೈನ್‍ಪೇಟೆ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಸಮಗ್ರ ಜಲಮೂಲಗಳ ನಿರ್ವಹಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಜಲಮರುಪೂರಣ ಅಭಿಯಾನ ಜೀವಜಲದ ಮೂಲ ಉಳಿಸುವ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಂದರು.

ಅಭಿಯಾನಕ್ಕೆ ಚಾಲನೆ ನಿಡಿ ಮಾತನಾಡಿದ ಚಲನಚಿತ್ರ ನಟ, ಜಗ್ಗೇಶ್  ವಿದ್ಯಾರ್ಥಿಗಳು ಕೂಡ ನೀರಿನ ಬಗ್ಗೆ ಜಾಗೃತವಾಗಬೇಕು ವಿಶ್ವದಲ್ಲೇ ಪ್ರಜ್ಞಾವಂತ ಜನರಿರುವ ಪ್ರದೇಶ ಎಂದು ಹೆಸರು ಪಡೆದದ್ದು ದ.ಕ ಜಿಲ್ಲೆ ಜೊತೆಗೆ ಅತ್ಯಂತ ಹೆಚ್ಚು ವನಸಿರಿ ಹಾಗೂ ಜಲವನ್ನು ಹೊಂದಿರುವ ದ.ಕ ಜಿಲ್ಲೆಯಾಗಿದ್ದು ಇಂದು ಇಂತಹ ಜಿಲ್ಲೆಯಲ್ಲಿ ನೀರಿಗೆ ಬರ ಬಂದಿರುವುದು ದೊಡ್ಡ ದುರಂತ ಎಂದ ಅವರು ಸಾಮಾಜಿಕ ಕಳಕಳಿಯ ಬಗ್ಗೆ ಚಿಂತಿಸುವ ಮನೋಭಾವ ನಮ್ಮಲ್ಲಿರಬೇಕು. ನಾವು ಪರಿಸರವನ್ನು ಪ್ರೀತಿಸುವವರ ಸ್ನೇಹ ಬೆಳೆಸಬೇಕೇ ವಿನಃ ಪರಿಸರವನ್ನು ನಾಶ ಮಾಡುವವರ ಸ್ನೇಹ ಬೆಳೆಸಬಾರದು. ಪರಿಸರ ದಿನಾಚರಣೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ನಿತ್ಯ ಪರಿಸರ ದಿನವನ್ನು ಆಚರಿಸಿ ಮರಗಳನ್ನು ಬೆಳೆಸುವ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬೇಕು ಎಂದರು.ಮಕ್ಕಳಿಗೆ ಸಂಸ್ಕಾರಯುತ ಜೀವನ ಪದ್ಧತಿಯನ್ನು ಕಲಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯ ಅರಿವನ್ನು ಮೂಡಿಸಬೇಕು ಎಂದರು. 

ದ.ಕ.ಜಿ.ಪಂನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಸೆಲ್ವಮಣಿ ಜಾಗೃತ ಅಂಟುಪತ್ರ ಬಿಡುಗಡೆಗೊಳಿಸಿ ಮಾತನಾಡಿ ಇಂದು ಪ್ರಾರಂಭವಾದ ಜಲಮರುಪೂರಣ ಅಭಿಯಾನ ನಿರಂತರವಾದ ಕಾರ್ಯಕ್ರಮವಾಗಬೇಕು. ಪ್ರತಿಯೊಬ್ಬರ ಬದುಕಿಗೆ ನೀರು ಅಗತ್ಯವಾಗಿದ್ದು ಇದರ ಬಗ್ಗೆ ಜಾಗೃತಗೊಳ್ಳಬೇಕು ಎಂದರು.

ಶಾಸಕ ಹರೀಶ್ ಪೂಂಜಾ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಮಳೆಯ ಸ್ಥಿತಿಯನ್ನು ಅವಲಂಬಿಸಿದಾಗ ಮುಂದಿನ ಬೇಸಿಗೆ ಕಾಲವು ಯಾವ ರೀತಿಯಲ್ಲಿ ಇರಬಹುದು ಎಂದು ಊಹಿಸಲು ಸಾಧ್ಯವಾಗದು. ಸಾಂಪ್ರದಾಯಿಕ ಕೃಷಿ ಮಾಯವಾಗಿ ಭೂಮಿಗೆ ನೀರು ಇಂಗದೇ ಇರುವುದರಿಂದ ಈ ಜಲಕ್ಷಾಮಕ್ಕೆ ಕಾರಣವಾಗಿದೆ. ಪ್ರತೀ  ಮನೆಯಲ್ಲಿಯೂ ಬಾವಿಯನ್ನು ರಚಿಸಬೇಕು ಮತ್ತು ಪಾಳುಬಿದ್ದ ಕೆರೆಗಳನ್ನು ದುರಸ್ಥಿಗೊಳಿಸಬೇಕಾಗಿದೆ ಎಂದರು.

ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಶ್ರೀಕ್ಷೇತ್ರ ಧ.ಗ್ರಾ ಯೋಜನೆಯ ಕಾರ್ಯನಿರ್ವಾಹಕ ನಿರ್ದೆಶಕ ಡಾ. ಎಲ್.ಹೆಚ್ ಮಂಜುನಾಥ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್, ಪರಿಮಳ ಜಗ್ಗೇಶ್ ಉಪಸ್ಥಿತರಿದ್ದರು.

ದ.ಕ ನಿರ್ಮಿತ್ ಕೇಂದ್ರದ ಯೋಜನಾ ನಿದೇರ್ಶಕ ರಾಜೇಂದ್ರ ಕಲ್ಬಾವಿ, ಮಡಂತ್ಯಾರ್ ಸೇಕ್ರೇಡ್ ಹಾರ್ಟ್ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಜೋಸೆಫ್ ಎಂ.ಎನ್, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News