ಪೌರ ಕಾರ್ಮಿಕರ ಸಾವು ಯಾವ ರಾಜ್ಯದಲ್ಲಿ ಹೆಚ್ಚು ಗೊತ್ತೇ?

Update: 2019-07-10 04:23 GMT

ಹೊಸದಿಲ್ಲಿ, ಜು.10: ದೇಶದ 15 ರಾಜ್ಯಗಳಲ್ಲಿ 1993ರಿಂದೀಚೆಗೆ ಒಳಚರಂಡಿ ಸ್ವಚ್ಛತೆ ವೇಳೆ 620 ಪೌರಕಾರ್ಮಿಕರು ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 144 ಹಾಗೂ ಗುಜರಾತ್‌ನಲ್ಲಿ 131 ಮಂದಿ ಜೀವ ಕಳೆದುಕೊಂಡಿದ್ದು, ಅತಿಹೆಚ್ಚು ಪೌರಕಾರ್ಮಿಕರು ಸಾವಿಗೀಡಾದ ರಾಜ್ಯಗಳು ಎಂಬ ಕುಖ್ಯಾತಿಗೆ ಪಾತ್ರವಾಗಿವೆ. ಕರ್ನಾಟಕದಲ್ಲಿ ಈ ಅವಧಿಯಲ್ಲಿ ಇಂಥ 75 ಪ್ರಕರಣಗಳು ವರದಿಯಾಗಿವೆ.

ಇದುವರೆಗೆ ವರದಿಯಾದ 620 ಪ್ರಕರಣಗಳ ಪೈಕಿ 445 ಪ್ರಕರಣಗಳಲ್ಲಿ ಪೂರ್ಣ ಪರಿಹಾರ ನೀಡಲಾಗಿದೆ. 58 ಪ್ರಕರಣಗಳಲ್ಲಿ ಭಾಗಶಃ ಪರಿಹಾರ ನೀಡಲಾಗಿದ್ದು, 117 ಪ್ರಕರಣಗಳು ಬಾಕಿ ಇವೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ರಾಮದಾಸ್ ಅಠಾವಳೆ ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇಶಾದ್ಯಂತ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ 1993ರಿಂದೀಚೆಗೆ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವುದನ್ನು ಗುರುತಿಸಿ ವರದಿ ಸಲ್ಲಿಸುವಂತೆ ಸುಪ್ರೀಂಕೋಟ್ 2014ರಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು. ಮೃತ ಕಾರ್ಮಿಕರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿತ್ತು.

ಇತರ ಹನ್ನೆರಡು ರಾಜ್ಯಗಳಾದ ಉತ್ತರ ಪ್ರದೇಶದಲ್ಲಿ- 71, ಹರ್ಯಾಣ- 51, ರಾಜಸ್ಥಾನ-33, ಪಂಜಾಬ್-30, ದಿಲ್ಲಿ-28, ಪಶ್ಚಿಮ ಬಂಗಾಳ-18, ಉತ್ತರಾಖಂಡ-9, ಆಂಧ್ರ ಪ್ರದೇಶ-8, ಛತ್ತೀಸ್‌ಗಢ ಹಾಗೂ ಚಂಡೀಗಢ ತಲಾ 4 ಹಾಗೂ ತೆಲಂಗಾಣದಲ್ಲಿ ಇಬ್ಬರು ಪೌರಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ.

ದೇಶಾದ್ಯಂತ 1993ರಿಂದ 2019 ಜೂನ್‌ವರೆಗೆ ಒಟ್ಟು 53,598 ಮಂದಿ ಜಾಡಮಾಲಿಗಳನ್ನು ಗುರುತಿಸಲಾಗಿದೆ. ಪೌರಕಾರ್ಮಿಕರ ಸಾವಿನ ಪ್ರಕರಣಗಳಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ ಎನ್ನುವುದು ನಿಜವೇ ಎಂಬ ಉಪಪ್ರಶ್ನೆಗೆ, "ಇಂಥ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಬಗ್ಗೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಿಂದ ಯಾವ ವರದಿಯೂ ಬಂದಿಲ್ಲ" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News