Breaking News- ರಾಜೀನಾಮೆ ನೀಡಲು ಬಿಜೆಪಿಯಿಂದ ಹಣ, ಅಧಿಕಾರದ ಆಮಿಷ: ಶಾಸಕ ರಾಜೇಗೌಡ ಆರೋಪ

Update: 2019-07-10 08:32 GMT

ಬೆಳ್ತಂಗಡಿ, ಜು.10: ‘‘ರಾಜೀನಾಮೆ ನೀಡುವ ಬಗ್ಗೆ ನನ್ನ ಮೇಲೆ ತುಂಬಾ ದಿನಗಳಿಂದ ಒತ್ತಡವಿದೆ. ಆದರೆ ಅದಕ್ಕೆಲ್ಲ ಗಮನ ಕೊಡುವುದಿಲ್ಲ. ನನ್ನದೇನಿದ್ದರೂ ಕ್ಷೇತ್ರದ ಅಭಿವೃದ್ಧಿ ಮಾತ್ರ’’ ಎಂದು ಶೃಂಗೇರಿಯ ಕಾಂಗ್ರೆಸ್ ಶಾಸಕ ರಾಜೇಗೌಡ ಹೇಳಿದ್ದಾರೆ.

 ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ರಾಜೇಗೌಡ ಅವರು ಬುಧವಾರ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದರು.

ಶಾಸಕನಾದಾಗಲಿಂದ ಪಕ್ಷ ಬಿಟ್ಟು ಬಿಜೆಪಿಗೆ ಬರುವಂತೆ ನಿರಂತರ ಒತ್ತಡ ಹೇರುತ್ತಿದ್ದಾರೆ. ಬಿಜೆಪಿಯ ಹಿರಿಯ ನಾಯಕರು ಕರೆ ಮಾಡಿ ಹಣ, ಅಧಿಕಾರದ ಎಲ್ಲ ರೀತಿಯ ಆಮಿಷಗಳನ್ನೂ ಒಡ್ಡುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಇದು ಇನ್ನೂ ಹೆಚ್ಚಾಗಿದೆ. ಆದರೆ ತಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿಯವರು ಅಧಿಕಾರಕ್ಕಾಗಿ ಯಾವ ಹಂತಕ್ಕೆ ಇಳಿಯಲೂ ಸಿದ್ಧರಾಗುತ್ತಿದ್ದಾರೆ. ಇದು ಪ್ರಜಾಪ್ರಭುತ್ವವನ್ನು ಅಣಕಿಸುವ ಕಾರ್ಯವಾಗಿದೆ. ಒಮ್ಮೆ ಚುನಾವಣೆಯಲ್ಲಿ ಗೆದ್ದವರು ಅವಧಿ ಮುಗಿಯುವವರೆಗೂ ಆ ಪಕ್ಷದಲ್ಲಿಯೇ ಉಳಿದುಕೊಳ್ಳಬೇಕು. ಅವಧಿ ಮುಗಿದು ಮುಂದಿನ ಚುನಾವಣೆಯ ಸಂದರ್ಭದಲ್ಲಿ ಪಕ್ಷಾಂತರ ಮಾಡುವುದಿದ್ದರೆ ಮಾಡಲಿ ಎಂದು ರಾಜೇಗೌಡ ಅಭಿಪ್ರಾಯಿಸಿದರು.

ಸದ್ಯದ ರಾಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ. ಅವರಿಂದ ಅನುಮತಿ ಪಡೆದೇ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದೇನೆ. ಇಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರೊಂದಿಗೂ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದು ರಾಜೇಗೌಡ ‘ವಾರ್ತಾಭಾರತಿಗೆ ವಿವರಿಸಿದರು.

ಹತ್ತು ದಿನಗಳ ಚಿಕಿತ್ಸೆಗಾಗಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದೇನೆ. ಆದರೆ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳುತ್ತೇನೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News