ಬಂಟ್ವಾಳ ತಾಲೂಕಿನ ಒಂಟಿ ಮಹಿಳೆಗಿಲ್ಲ ಸ್ವಂತ ಸೂರು !
ಬಂಟ್ವಾಳ, ಜು. 10: ಕೋಳಿ ಗೂಡಿನಂತಹ ಸಣ್ಣ ಮನೆ. ಸುತ್ತಲೂ ಟರ್ಪಾಲಿನ ಹೊದಿಕೆ. ಜೋರು ಗಾಳಿ ಬಂದರೆ ಹಾರಿ ಹೋಗುವಂತಿರುವ ಸಿಮೆಂಟಿನ ಛಾವಣಿ... ಅದರಲ್ಲಿ ಜೀವನ ಸಾಗಿಸುತ್ತಿರುವ ಬಡ ಒಂಟಿ ಮಹಿಳೆ. ಬೀಡಿ ಕಟ್ಟುವ ಸೊಪ್ಪು, ಸ್ವಲ್ಪ ಪಾತ್ರೆ, ಪಗಡೆ ಒಂದಷ್ಟು ಗುಳಿಗೆಗಳು ಆಕೆಯ ಪಾಲಿಗಿರುವ ಆಸ್ತಿ. ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ನೆಲ್ಲಿಮಾರ್ ನಿವಾಸಿ ಕುಲಾಲ ಸಮುದಾಯಕ್ಕೆ ಸೇರಿದ ದಿ.ರಾಮ ಕುಲಾಲ್ ಅವರ ಪತ್ನಿ ಭವಾನಿ ಅವರ ಬದುಕಿನ ದಯಾನೀಯ ಸ್ಥಿತಿಯಿದು.
ದೇಶ ಎಷ್ಟೇ ಅಭಿವೃದ್ಧಿಗೊಂಡರೂ, ಬಡವರ ಏಳಿಗೆಗಾಗಿ ಸರಕಾರ ನೂರಾರು ಯೋಜನೆಗಳನ್ನು ಜಾರಿಗೊಳಿಸಿದರೂ ಸಮಾಜದ ಅರ್ಹ ಫಲಾನುಭವಿಗೆ ಸವಲತ್ತುಗಳು ತಲುಪುತ್ತಿಲ್ಲ ಎನ್ನ್ನುವುದಕ್ಕೆ ಈ ಮಹಿಳೆಯೇ ಸಾಕ್ಷಿ. ವಿಧವಾ ವೇತನದ ಕಿಂಚಿತ್ತು ಮೊತ್ತ ಇವರ ಕೈ ಸೇರುತ್ತಿರುವುದು ಬಿಟ್ಟರೆ ಬೇರಾವುದೇ ಯೋಜನೆಗಳು ಇವರ ಮನೆ ತಲುಪಿಲ್ಲ. ದಿನವಿಡೀ ಬೀಡಿ ಸುತ್ತಿದ್ದಕ್ಕೆ ಸಿಗುವ ಅಲ್ಪ ಆದಾಯ ಔಷಧಿಗೆ ಸಾಲುತ್ತಿಲ್ಲ.
ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ರಾಮ ಕುಲಾಲ್ ಹಾಗೂ ಭವಾನಿ ದಂಪತಿಗೆ ಮಕ್ಕಳಿರಿಲಿಲ್ಲ. ಪತಿಗೆ ಪತ್ನಿಯೇ ಆಸರೆ, ಪತ್ನಿಗೆ ಪತಿಯೇ ಆಧಾರ. ನೆಲ್ಲಿಮಾರ್‍ನ ಎತ್ತರದ ಪ್ರದೇಶವೊಂದರಲ್ಲಿ ಸಣ್ಣ ಮನೆ ಕಟ್ಟಿ ಜೀವನ ಸಾಗಿಸುತ್ತ, ತಕ್ಕ ಮಟ್ಟಿಗೆ ನೆಮ್ಮದಿಯಾಗಿದ್ದ ಈ ಕುಟುಂಬಕ್ಕೆ 5 ವರ್ಷದ ಹಿಂದೆ ಅನಾರೋಗ್ಯದಿಂದ ಪತಿ ಮರಣ ಹೊಂದಿದರು. ಇದ್ದ ಒಬ್ಬ ತಮ್ಮನೂ ಅಪಘಾತದಲ್ಲಿ ಇಹಲೋಕ ತ್ಯಜಿಸಿದರು. ಒಬ್ಬಂಟಿಯಾಗಿದ್ದ ಮಹಿಳೆಗೆ ಬಂಧುಗಳು ಸೇರಿಕೊಂಡು ಸಣ್ಣ ಗುಡಿಸಲೊಂದು ನಿರ್ಮಿಸಿಕೊಟ್ಟರು. ಕಳೆದ ಐದು ವರ್ಷದಿಂದ ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿರುವ ಭವಾನಿಯಕ್ಕನಿಗೆ ಮನೆಯದ್ದೇ ಚಿಂತೆ. ಸೂರು ಗಟ್ಟಿಯಾಗಿದ್ದರೆ ಹೇಗಾದರೂ ನೆಮ್ಮದಿಯಿಂದ ಬದುಕಿಕೊಳ್ಳುತ್ತೇನೆ ಎನ್ನುವ ಆಸೆ. ಆದರೆ, ಬಡ ಮಹಿಳೆಯ ವೇದನೆ ಸರಕಾರಕ್ಕೆ ಮುಟ್ಟಿಲ್ಲ.
ಮನೆ ವಿದ್ಯುತ್ ಬೆಳಕು ಕಂಡಿಲ್ಲ
ರಾತ್ರಿಯಾದರೆ ಭವಾನಿಯವರ ಸುತ್ತಮುತ್ತಲಿನ ಮನೆಗಳೆಲ್ಲಾ ವಿದ್ಯುತ್ ದೀಪಗಳಿಂದ ಬೆಳಗಿದರೆ ಇವರ ಮನೆಯಲ್ಲಿ ಮಾತ್ರ ಚಿಮಿಣಿ ಬೆಳಕು. ದೇಶದ ಮೂಲೆ ಮೂಲೆಗೂ ಸರಕಾರದ ಉಚಿತ ವಿದ್ಯುತ್ ವ್ಯವಸ್ಥೆಗಳು ತಲುಪುತ್ತಿದ್ದರೆ ಈ ಮನೆ ಮಾತ್ರ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದೆ. ಬಂಟ್ವಾಳ ರೋಟರಿ ಲೊರೆಟ್ಟೋ ಹಿಲ್ಸ್ ಸಂಸ್ಥೆ ಸೋಲಾರ್ ವಿದ್ಯುತ್ ಒದಗಿಸಿ ಮನೆಗೆ ಬೆಳಕು ನೀಡುವ ಪ್ರಯತ್ನ ಮಾಡಿದೆ.
ಬಲ ಕಳೆದುಕೊಳ್ಳುತ್ತಿರುವ ಕಾಲು: ಭವಾನಿಯವರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗ ಮುಳ್ಳು ತಾಕಿ ಕಾಲಿನ ಎರಡು ಬೆರಳುಗಳನ್ನು ಕತ್ತರಿಸಿ ತೆಗೆಯ ಬೇಕಾಯಿತು. ಕಾಲಿನ ನೋವು ವಿಪರೀತವಾಗಿದ್ದು,ಹೆಚ್ಚೊತ್ತು ನಿಲ್ಲಲು ಆಗುತ್ತಿಲ್ಲ. ಒಂದೆಡೆ ದೈಹಿಕ ನೋವು, ಇನ್ನೊಂದೆಡೆ ಕಾಡುತ್ತಿರುವ ಬಡತನ ಈ ಜಂಜಾಟದ ನಡುವೆ ಸರಕಾರ, ಸಂಘ ಸಂಸ್ಥೆಗಳು ಆಸರೆ ಒದಗಿಸುವರೇ ಎಂದು ಕಾಯುತ್ತಿದ್ದಾರೆ ಈ ವೃದ್ಧೆ.