ಜು.19ರಿಂದ ಮೂಡುಬಿದಿರೆಯಲ್ಲಿ `ಯಕ್ಷದೇವ' ದಿಂದ 22ನೇ ವರ್ಷದ `ಯಕ್ಷಾರ್ಪಣ-2019'

Update: 2019-07-10 14:04 GMT

ಮೂಡುಬಿದಿರೆ : ಶ್ರೀ ಯಕ್ಷದೇವ ಮಿತ್ರಕಲಾಮಂಡಳಿಯ 22ನೇ ವರ್ಷದ, 'ಯಕ್ಷಾರ್ಪಣ-2019': ಸಂಸ್ಮರಣೆ-ಸಂಮಾನ-ಯಕ್ಷಗಾನ ಕಾರ್ಯಕ್ರಮ  ಪದ್ಮಾವತಿ ಕಲಾಮಂದಿರದಲ್ಲಿ ಜು.19ರಿಂದ 21ರವರೆಗೆ ಜರಗಲಿದೆ ಎಂದು ಯಕ್ಷದೇವದ ದೇವಾನಂದ ಭಟ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಜು.19ರಂದು ಡಾ. ಮೋಹನ ಆಳ್ವರ ಅಧ್ಯಕ್ಷತೆ, ಶಾಸಕ ಉಮಾನಾಥ ಕೋಟ್ಯಾನ್ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ವಿಠಲ ಬೇಲಾಡಿ 'ಯಕ್ಷಾರ್ಪಣ' ಉದ್ಘಾಟಿಸಲಿದ್ದಾರೆ.

'ದಾಮೋದರ ಶೆಟ್ಟಿಗಾರ್' ಮತ್ತು  'ಶ್ರೀನಾಥ್ ಮಂಗಲ್ಪಾಡಿ' ಸಂಸ್ಮರಣೆ, ಪ್ರಸಾದನ  ಕಲಾವಿದ ಜಯದೇವಾಡಿಗ ಬಲವಿನ ಗುಡ್ಡೆ ಮತ್ತು ಯಕ್ಷಗಾನ ಕಲಾವಿದ ನಯನಚಂದ್ರ ಶೆಟ್ಟಿ  ಇವರಿಗೆ ಸಮ್ಮಾನ ನಡೆಯಲಿವೆ. ಸಮಾರಂಭಕ್ಕೂ ಮುನ್ನ 3 ಗಂಟೆಗೆ 'ಗಾನವೈಭವ', ಸಂ.ಗಂ.6ರಿಂದ ಪ್ರಸಿದ್ಧ ಕಲಾವಿದರಿಂದ 'ಅವತಾರ ವೇದಿಕೆ' ತಾಳಮದ್ದಲೆ ಏರ್ಪಡಿಸಲಾಗಿದೆ.

ಜು.20ರಂದು ಮಧ್ಯಾಹ್ನ 2ರಿಂದ ಶ್ರೀ ಯಕ್ಷದೇವ ಸಾಧನ ಕೇಂದ್ರದವರಿಂದ ಯಕ್ಷಗಾನ, 5ರಿಂದ ಕೇಮಾರು ಸ್ವಾಮೀಜಿ, ಕೆ. ಅಭಯಚಂದ್ರ ಸಹಿತ ಗಣ್ಯರ ಉಪಸ್ಥಿತಿಯಲ್ಲಿ  ಲಾಡಿ ಕೃಷ್ಣ ಶೆಟ್ಟಿ  ಮತ್ತು  ಶ್ರೀಮತಿ ವನಜಾಕ್ಷಿ ಅಮ್ಮ' ಸಂಸ್ಮರಣೆ, ಜಪ್ಪು ದಯಾನಂದ ಶೆಟ್ಟಿ ಹಾಗೂ ವಿದುಷಿ ಗೀತಾ ಸರಳಾಯ ಅವರಿಗೆ ಸಮ್ಮಾನ,  ಸಂಜೆ ಪ್ರಸಿದ್ಧ ಕಲಾವಿದರಿಂದ `ಕುಶ-ಲವ' ತೆಂಕು ಬಡಗು ಕೂಡಾಟ ಏರ್ಪಡಿಸಲಾಗಿದೆ.

ಜು.21ರಂದು ಮಧ್ಯಾಹ್ನ 2ರಿಂದ ಶ್ರೀಯಕ್ಷದೇವದ ತಿಂಗಳ ಕೂಟದ ಕಲಾವಿದರಿಂದ `ಕರ್ಣಾರ್ಜುನ' ತಾಳಮದ್ದಲೆ, ಪುತ್ತಿಗೆ ಮಠ ಸುಗುಣೇಂದ್ರ ತೀರ್ಥರ ಆಶೀರ್ವಚನ, ಅಮರನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಶ್ರಾಂತ ಕುಲಪತಿ ಬಿ.ಎ.ವಿವೇಕ ರೈ ಅವರು ಹಿಮ್ಮೇಳವಾದಕ ಪೆರುವಾಯಿ ಕೃಷ್ಣ ಭಟ್, ಹಿರಿಯ ವೇಷಧಾರಿ ಬೋಳಾರ ಸುಬ್ಬಯ್ಯ ಶೆಟ್ಟಿ ಅವರಿಗೆ  `ಶ್ರೀ ಯಕ್ಷದೇವ ಪ್ರಶಸ್ತಿ -2019'ಪ್ರಶಸ್ತಿ ಪ್ರದಾನಗೈಯಲಿರುವರು. ಸಂ.ಗಂ. 6ರಿಂದ ಹಾಸ್ಯಕಲಾವಿದರಿಂದ `ಶೂರ್ಪನಖಾ ವಿವಾಹ' (ಕನ್ನಡ), `ತೆಲಿಕೆದ ತೇಟ್ಲ ' (ತುಳು) ಹಾಸ್ಯ ರಹಸ್ಯ ಎಂಬ ವಿಶೇಷ ಕಾರ್ಯಕ್ರಮ ಸಂಯೋಜಿಸಲಾಗಿದೆ. ಎಲ್ಲ ಕಾರ್ಯಕ್ರಮಗಳಿಗೆ ಆಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ಅವರು ವಿವರಿಸಿದರು.

ಸಂಘಟನೆಯ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ, ಯುವರಾಜ ಕಲ್ಲೋಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News