ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ,ಯುಕೆಜಿ ಪ್ರಾರಂಭಕ್ಕೆ ಆಗ್ರಹ

Update: 2019-07-10 14:53 GMT

ಉಡುಪಿ, ಜು. 10:ಪಬ್ಲಿಕ್ ಶಾಲೆಗಳ ಬದಲು ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ಉಡುಪಿ ಜಿಲ್ಲಾ ಸಮಿತಿಯ ಸದಸ್ಯರು ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ, ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಜಿಲ್ಲೆಯ 54 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ಪ್ರಾರಂಭವಾಗಿವೆ. ಇದರಿಂದ ಅಂಗನವಾಡಿಗೆ ಬರಬೇಕಿದ್ದ ಮಕ್ಕಳು ಪಬ್ಲಿಕ್ ಶಾಲೆಗಳಲ್ಲಿ ಹೆಸರು ನೊಂದಾಯಿಸಿಕೊಳ್ಳುತ್ತಿದ್ದಾರೆ. ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ 30ರಿಂದ 3ಕ್ಕೆ ಕುಸಿತವಾಗಿದೆ. ಕಳೆದ 40 ವರ್ಷಗಳಿಂದ ಐಸಿಡಿಎಸ್ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರು ಇಂದು ಬೀದಿಪಾಲಾಗುವ ಭೀತಿಯನ್ನೆದುರಿಸುತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇದರೊಂದಿಗೆ ಕೇಂದ್ರ ಸರಕಾರ ಕಳೆದ ಅಕ್ಟೋಬರ್ ತಿಂಗಳಲ್ಲಿ ಘೋಷಣೆ ಮಾಡಿದ 1,500ರೂ.ಗಳ ಗೌರವಧನವನ್ನು ಕೂಡಲೇ ಬಿಡುಗಡೆಗೊಳಿಸ ಬೇಕು. ಪ್ರತಿ ತಿಂಗಳು ನಮಗೆ ಗೌರವಧನವನ್ನು ಬಿಡುಗಡೆಗೊಳಿಸಬೇಕು.ಸೇವಾ ಜೇಷ್ಠತೆಯ ಆಧಾರದಲ್ಲಿ ವೇತನ ಹೆಚ್ಚಳಗೊಳಿಸಬೇಕು ಹಾಗೂ ಐಎಲ್‌ಸಿ ಆಧಾರಿತ ಪಿಂಚಣಿಯನ್ನು ನೀಡಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದವರು ಹೇಳಿದರು.

ರಾಜ್ಯದಲ್ಲಿ 62,580 ಅಂಗನವಾಡಿ ಕೇಂದ್ರಗಳು, 3331 ಮಿನಿ ಅಂಗನ ವಾಡಿ ಕೇಂದ್ರಗಳು ಕಳೆದ 45 ವರ್ಷಗಳಿಂದ ಕಾರ್ಯಾಚರಿಸುತ್ತಿವೆ. ಇಂದು ಅಂಗನವಾಡಿ ಕೇಂದ್ರಗಳಲ್ಲಿ 0ಯಿಂದ 3 ವರ್ಷ ಪ್ರಾಯದ 23,23,347 ಮಕ್ಕಳು, 3ರಿಂದ 6ವರ್ಷ ಪ್ರಾಯದ 16,40,170 ಮಕ್ಕಳು, 8,95,465 ಗರ್ಭಿಣಿಯರು, ಬಾಣಂತಿಯರನ್ನೊಳಗೊಂಡಂತೆ ಒಟ್ಟು 51.04 ಲಕ್ಷ ಫಲಾನುಭವಿಗಳಿದ್ದಾರೆ ಎಂದವರು ವಿವರಿಸಿದರು.

ಇದೀಗ ಸರಕಾರ ಸರಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಅಂಗನವಾಡಿ ಕೇಂದ್ರದಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಸರಕಾರಿ ಶಾಲೆಗಳಿಗೆ ವಹಿಸುತ್ತಿರುವುದು ಸರಿಯಲ್ಲ. ಆದ್ದರಿಂದ ಅಂಗನವಾಡಿ ಕೇಂದ್ರ ಗಳಲ್ಲಿಯೇ ಎಲ್‌ಕೆಜಿ ಹಾಗೂ ಯುಕೆಜಿಗಳನ್ನು ಪ್ರಾರಂಭಿಸಬೇಕು ಎಂದರು.

ಇತರ ಬೇಡಿಕೆಗಳು: ಅಂಗನವಾಡಿ ಕೇಂದ್ರದಲ್ಲಿ 1995ರಲ್ಲಿ ಆಯ್ಕೆಯಾದ ಹಾಗೂ ಎಸೆಸೆಲ್ಸಿ ಪಾಸಾದ ಅಂಗನವಾಡಿ ಶಿಕ್ಷಕರಿಗೆ ತರಬೇತಿ ನೀಡಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಕೇಂದ್ರದಲ್ಲಿ ಎಲ್ಲ ಮೂಲಭೂತ ಸೌಕರ್ಯ ನೀಡಬೇಕು. ಮಕ್ಕಳಿಗೆ ಸಮವಸ್ತ್ರ ನೀಡಬೇಕು. ನಿವೃತ್ತಿ ಸೌಲಭ್ಯವನ್ನು ಬದಲಿಸಿ ಐಎಲ್‌ಸಿ ಆಧಾರಿತ ಪೆನ್‌ಷನ್ ನೀಡಬೇಕು. ಸೇವಾ ಜೇಷ್ಠ ಆಧಾರದ ಮೇಲೆ ವೇತನ ಜಾರಿ, ಮೇಲ್ವಿಚಾರಕಿಯಾಗಿ ಮುಂಬಡ್ತಿ ಹೊಂದುವ ಹುದ್ದೆಗಳನ್ನು ಸಂಪೂರ್ಣವಾಗಿ ಅಂಗನವಾಡಿ ಕಾರ್ಯಕರ್ತರಿಗೆ ನೀಡಬೇಕು.

ಪ್ರಾಥಮಿಕ ಶಾಲೆಗಳ ಪ್ರವೇಶಕ್ಕೂ ಮುನ್ನ ಅಂಗನವಾಡಿ ಕೇಂದ್ರದಿಂದ ಯುಕೆಜಿ ಪೂರೈಸಿದ ಮಕ್ಕಳಿಗೆ ಟಿಸಿ ಪಡೆಯುವ ಪದ್ಧತಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷೆ ಭಾರತಿ, ಖಜಾಂಚಿ ಯಶೋಧ ಕೆ., ಕುಂದಾಪುರ ತಾಲೂಕು ಅಧ್ಯಕ್ಷೆ ಬಿ.ಆಶಾಲತಾ ಶೆಟ್ಟಿ, ಖಜಾಂಚಿ ಭಾಗ್ಯ, ಪ್ರ.ಕಾರ್ಯದರ್ಶಿ ಶಾಂತಾ, ಬ್ರಹ್ಮಾವರ ತಾಲೂಕು ಅಧ್ಯಕ್ಷೆ ಜಯಲಕ್ಷ್ಮೀ ಎಸ್ ಶೆಟ್ಟಿ, ಸರೋಜಿನಿ, ಉಡುಪಿ ತಾಲೂಕು ಸಮಿತಿ ಅಧ್ಯಕ್ಷೆ ಅಂಬಿಕಾ, ಖಜಾಂಚಿ ಪ್ರಮೀಳಾ, ಸಿಐಟಿಯು ಮುಖಂಡರಾದ ಕೆ.ಶಂಕರ್, ಬಾಲಕೃಷ್ಣ ಶೆಟ್ಟಿ ಮುಂತಾದವರು ಈ ಸಂದರ್ಭ ದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News