ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ವಿನಯಕುಮಾರ್ ಸೊರಕೆ

Update: 2019-07-10 15:13 GMT

ಉಡುಪಿ, ಜು.10: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಶಾಸಕರನ್ನು ಖರೀದಿಸುವ ಮೂಲಕ ಸರಕಾರವನ್ನು ಅಸ್ಥಿರಗೊಳಿಸಲು ತೀವ್ರ ಪ್ರಯತ್ನ ನಡೆಸುತ್ತಿರುವ ಬಿಜೆಪಿ ತನ್ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಷಡ್ಯಂತ್ರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ರಾಜ್ಯದಲ್ಲಿ ಪ್ರಜಾಪ್ರಭುತ್ವ ಮಾರ್ಗದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮೈತ್ರಿ ಸರಕಾರ ಆಡಳಿತಕ್ಕೇರಿದ ದಿನದಿಂದ ಬಿಜೆಪಿಯ ಕಿರುಕುಳ ಪ್ರಾರಂಭಗೊಂಡಿದ್ದು, ಈವರೆಗೆ ಸರಕಾರವನ್ನು ಉರುಳಿಸುವ ಆರು ಪ್ರಯತ್ನಗಳನ್ನು ನಡೆಸಿದೆ. ರಾಜ್ಯದಲ್ಲಿ ಜವಾಬ್ದಾರಿಯುವ ವಿರೋಧ ಪಕ್ಷವಾಗಿ ಸಂಪೂರ್ಣ ವೈಫಲ್ಯತೆಯನ್ನು ಕಂಡಿರುವ ಬಿಜೆಪಿ, ಯಡಿಯೂರಪ್ಪ ಆಡಳಿತ ಕಾಲದಲ್ಲಿ ನಡೆಸಿದ ಆಪರೇಷನ್ ಕಮಲವನ್ನು ಪುನರಪಿ ಮಾಡಿ ವಾಮಮಾರ್ಗದಲ್ಲಿ ಅಧಿಕಾರಿ ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ದುರಾದೃಷ್ಟದ ಸಂಗತಿ ಎಂದರೆ ಕರ್ನಾಟಕದ ರಾಜ್ಯಪಾಲರೂ ಇದರಲ್ಲಿ ಶಾಮೀಲಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಪಿಯೂಸ್ ಗೊಯೆಲ್ ನೇತೃತ್ವದಲ್ಲಿ ದೇಶದಲ್ಲಿ ವಿರೋಧ ಪಕ್ಷದ ಆಡಳಿತ ಇರದಂತೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಹಣದ ಹೊಳೆ ಹರಿಸಿ, ಅಕ್ರಮ ಮಾರ್ಗದ ಮೂಲಕ ಶಾಸಕರ ಖರೀದಿಗೆ ಸಾವಿರಾರು ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದೆ. ಕೆಲವರಿಂದ ರಾಜಿನಾಮೆ ಕೊಡಿಸಿ, ಇನ್ನು ಕೆಲವರನ್ನು ಪಕ್ಷಾಂತರ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಅರವಿಂದ ಲಿಂಬಾವಳಿ, ಯಡಿಯೂರಪ್ಪರ ಪುತ್ರರು, ಅವರ ಪಿಎ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಜಗಜ್ಜಾಹೀರಾಗಿದೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗುವುದಿಲ್ಲ ಎಂದು ಇವರು ಭಾವಿಸಿದ್ದಾರೆ ಎಂದರು.

ನಾಗೇಶ್ ಕುಮಾರ್ ಉದ್ಯಾವರ ಅವರು ಮಾತನಾಡಿ, ಬಿಜೆಪಿ ಇಂದು ರಾಜ್ಯದಲ್ಲಿ ನಡೆಸುತ್ತಿರುವ ಅನೈತಿಕ ರಾಜಕೀಯವನ್ನು ವಿರೋಧಿಸಿ ಇಂದು ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಪ್ರಜಾಪ್ರಭುತ್ವದ ನೆಲೆಯಲ್ಲೇ ಅಸ್ತಿತ್ವಕ್ಕೆ ಬಂದ ಸರಕಾರವನ್ನು ವಾಮಮಾರ್ಗದ ಮೂಲಕ, ಅನೈತಿಕವಾಗಿ ಬೀಳಿಸುವ ಪ್ರಯತ್ನ ಪ್ರಜಾಪ್ರಭುತ್ವಕ್ಕೆ ಕಂಟಕ ತರುವಂತಾದ್ದು ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೈತ್ರಿ ಸರಕಾರ ಹೊಸತಲ್ಲ. ರಾಜ್ಯ ಸರಕಾರವನ್ನು ಶತಾಯ-ಗತಾಯ ಉರುಳಿಸುವ ಬಿಜೆಪಿ ಪ್ರಯತ್ನದಲ್ಲಿ ಅದರ ಹಿಡನ್ ಎಜೆಂಡಾ ಅಡಗಿದೆ. ಇಲ್ಲಿ ಅವರ ಪ್ರಯತ್ನ ಯಶಸ್ವಿಯಾದರೆ ಮುಂದೆ ಇದು ಪಶ್ಚಿಮಬಂಗಾಳ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲೂ ಪ್ರಯೋಗಿಸಲ್ಪಡುತ್ತದೆ. ಮೋದಿ-ಶಾರ ಪ್ರತಿಯೊಂದು ಹೆಜ್ಜೆಯ ಹಿಂದೆಯೂ ಒಂದು ಹಿಡನ್ ಎಜೆಂಡಾ ಇರುತ್ತದೆ ಎಂದವರು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ರಾಜ್ಯದಲ್ಲಿ ಬಿಜೆಪಿ ಆರನೇ ಬಾರಿ ನಡೆಸುತ್ತಿರುವ ಸರಕಾರ ಉರುಳಿಸುವ ಈ ನೀಚ ಪ್ರಯತ್ನ ವನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡರಾದ ನರಸಿಂಹ ಮೂರ್ತಿ, ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಶಶಿಧರ ಶೆಟ್ಟಿ, ಎಚ್. ನಾರಾಯಣ, ಸರಸು ಬಂಗೇರ, ಡಾ.ಸುನೀತಾ ಶೆಟ್ಟಿ, ರೋಶನಿ ಒಲಿವೆರಾ, ಜ್ಯೋತಿ ಹೆಬ್ಬಾರ್, ವಿಶ್ವಾಸ್ ಅಮೀನ್, ಶಬ್ಬೀರ್ ಅಹ್ಮದ್, ಗಣೇಶ್ ಕೋಟ್ಯಾನ್, ಹಬೀಬ್ ಅಲಿ, ಎಂ.ಪಿ.ಮೊಯ್ದಿನಬ್ಬ,ಕಿರಣ್‌ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News