ಕರಾವಳಿಯಲ್ಲಿ ವರುಣನ ಆರ್ಭಟ: ಆಕಾಶಭವನ ಬಳಿ ಗೋಡೆ ಕುಸಿತ

Update: 2019-07-10 15:57 GMT

ಮಂಗಳೂರು, ಜು.10: ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಚುರುಕು ಪಡೆದಿದೆ. ಮಂಗಳೂರು ನಗರದ ಆಕಾಶಭವನ ಸಮೀಪದ ಪರಪಾದೆಯಲ್ಲಿ ಮನೆಯೊಂದರ ಹಿಂಭಾಗದ ತಡೆಗೋಡೆ ಕುಸಿದು ಬಿದ್ದಿದೆ.

ಪರಪಾದೆಯ ಶ್ರೀಧರ ಎಂಬವರ ಮನೆಯ ಹಿಂಭಾಗದ ತಡೆಗೋಡೆ ಮಂಗಳವಾರ ತಡರಾತ್ರಿ ಕುಸಿದು ಬಿದ್ದಿದೆ. ಆದರೆ ಮನೆಗೆ ಯಾವುದೇ ಹಾನಿಯಾಗಿಲ್ಲ. ತಡೆಗೋಡೆ ಕುಸಿದ ಪರಿಣಾಮ ಮನೆಯ ಹಿಂಭಾಗ ಶೀಟ್‌ಗೆ ಸ್ವಲ್ಪ ಹಾನಿಯಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಗುರುರಾಜ ಮರಳಹಳ್ಳಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಭೂಕುಸಿತದಿಂದ ಉಂಟಾಗಿದ್ದ ಮಣ್ಣನ್ನು ಹಿಟಾಚಿ ಹಾಗೂ ಜೇಸಿಬಿ ಬಳಸಿ ತೆರವುಗೊಳಿಸಲಾಗಿದೆ. ಮಳೆ ಇರುವ ಕಾರಣ ಧರೆ ಮತ್ತಷ್ಟು ಕುಸಿಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಶ್ರೀಧರ ಅವರ ಕುಟುಂಬವನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

ಮಂಗಳೂರಿನ ರಾಜಕಾಲುವೆಗಳು, ತೋಡುಗಳು ತುಂಬಿ ಹರಿಯುತ್ತಿವೆ. ಮಹಾತ್ಮಗಾಂಧಿ ರೋಡ್‌ಗೆ ಅಡ್ಡವಾಗಿ ಹರಿಯುವ ದೊಡ್ಡ ತೋಡು ತುಂಬಿ ಹರಿಯುತ್ತಿದೆ. ಕೊಟ್ಟಾರ ಚೌಕಿ ಬಳಿಯ ತೋಡು ಕೂಡ ತುಂಬಿ ಹರಿಯುತ್ತಿದೆ. ಜಪ್ಪಿನಮೊಗರು ಸಮೀಪದ ವೈದ್ಯನಾಥ ಗದ್ದೆಗೆ ಮಣ್ಣು ಹಾಕಿ ಸಮತಟ್ಟುಗೊಳಿಸಲಾದ ಪರಿಣಾಮ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಕಡೆಕಾರು ಕಡೆಗೆ ಹೋಗುವ ದಾರಿಯಲ್ಲಿ ನೀರು ನುಗ್ಗಿ ಪಾದಚಾರಿಗಳಿಗೆ ತೊಂದರೆ ಉಂಟಾಗಿದೆ. ನಂತರ ಸ್ಥಳೀಯರ ನೆರವಿನಿಂದ ತಾತ್ಕಾಲಿಕ ತೋಡು ನಿರ್ಮಿಸಲಾಯಿತು.

ಮಂಗಳೂರು-ಬೆಂಗಳೂರು ರಾ.ಹೆ. ಪಡೀಲ್ ಅಂಡರ್‌ಪಾಸ್ ಕೆಸರು ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ದ್ವಿಚಕ್ರವಾಹನ ಚಾಲಕರು ಹರಸಾಹಸ ಪಡುವಂತಾಗಿತ್ತು. ಅಲ್ಲಿನ ಕಾರು ಶೋರೂಂ ಸಮೀಪ ಮಳೆನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ರಸ್ತೆಗೆ ನೀರು ನುಗ್ಗಿ ಸಂಚಾರಕ್ಕೆ ತೊಂದರೆಯುಂಟಾಯಿತು.

ಮೈದುಂಬಿ ಹರಿಯುತ್ತಿರುವ ನದಿಗಳು: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜೀವ ನದಿಗಳಾದ ನೇತ್ರಾವತಿ, ಕುಮಾರಧಾರ ಹಾಗೂ ಲ್ಗುಣಿ ನದಿಗಳು ಮೈದುಂಬಿ ಹರಿಯುತ್ತಿವೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 5.7 ಮೀಟರ್‌ಗೆ ತಲುಪಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 16.4 ಮೀಟರ್ ಹಾಗೂ ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿ ನೀರಿನ ಮಟ್ಟ 16.4 ಮೀಟರ್‌ಗೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News