ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕಿ ಅಂದ್ರಾಬಿ ನಿವಾಸ ಜಪ್ತಿ ಮಾಡಿದ ಎನ್‌ಐಎ

Update: 2019-07-10 16:00 GMT

ಶ್ರೀನಗರ,ಜು.10: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಅಂದ್ರಾಬಿ ಅವರ ಇಲ್ಲಿಯ ನಿವಾಸವನ್ನು ಅಕ್ರಮ ಚಟುವಟಿಕೆಗಳ(ತಡೆ) ಕಾಯ್ದೆಯಡಿ ಬುಧವಾರ ಜಪ್ತಿ ಮಾಡಿದೆ.

ಅನುಮತಿಯಿಲ್ಲದೆ ಈ ಆಸ್ತಿಯನ್ನು ವರ್ಗಾವಣೆ ಅಥವಾ ಮಾರಾಟ ಮಾಡದಂತೆ,ಆಸ್ತಿಯ ಕುರಿತು ಯಾವುದೇ ರೀತಿಯ ವ್ಯವಹಾರ ನಡೆಸದಂತೆ ಎನ್‌ಐಎ ಸಂಬಂಧಿತರಿಗೆ ಸೂಚಿಸಿದೆ.

ಭಯೋತ್ಪಾದನೆಗೆ ಆರ್ಥಿಕ ನೆರವು ಈ ನಿವಾಸದ ಖರೀದಿಗಾಗಿ ಬಳಕೆಯಾಗಿದೆ ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆ ‘ದುಖ್ತರನ್-ಎ-ಮಿಲ್ಲತ್’ನ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಈ ನಿವಾಸ ಬಳಕೆಯಾಗುತ್ತಿತ್ತು ಎನ್ನಲು ಎನ್‌ಐಎ ಬಳಿ ಕಾರಣಗಳಿವೆ ಎಂದು ಮುಖ್ಯ ತನಿಖಾಧಿಕಾರಿ ವಿಕಾಸ ಕಥೇರಿಯಾ ಅವರು ಹೊರಡಿಸಿರುವ ಜಪ್ತಿ ಆದೇಶದಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿಯ ಪ್ರತ್ಯೇಕತಾವಾದಿ ನಾಯಕರು ವಿದೇಶಿ ಹಣವನ್ನು ಸ್ವೀಕರಿಸಿದ್ದಾರೆ ಮತ್ತು ಅದನ್ನು ಆಸ್ತಿಗಳ ಖರೀದಿಗೆ ಹಾಗೂ ತಮ್ಮ ಕುಟುಂಬ ಸದಸ್ಯರ ಶಿಕ್ಷಣ ವೆಚ್ಚವನ್ನು ಪಾವತಿಸಲು ಬಳಸಿಕೊಂಡಿದ್ದಾರೆ ಎಂದು ಎನ್‌ಐಎ ಕಳೆದ ತಿಂಗಳು ಹೇಳಿತ್ತು.

 ಭಯೋತ್ಪಾದನೆಗೆ ಆರ್ಥಿಕ ನೆರವು ಪ್ರಕರಣವೊಂದರಲ್ಲಿ ಅಂದ್ರಾಬಿ, ಶಬೀರ್ ಶಾ ಮತ್ತು ಮಸರತ್ ಆಲಂ ಭಟ್ ಅವರನ್ನು ಜೂ.4ರಂದು ಎನ್‌ಐಎ ಬಂಧಿಸಿದ್ದು,ದಿಲ್ಲಿಯ ನ್ಯಾಯಾಲಯವು ಜು.12ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ದೇಶದ ವಿರುದ್ಧ ಯುದ್ಧ ಸಾರಿದ್ದ ಮತ್ತು ಜಮ್ಮು-ಕಾಶ್ಮೀರದಲ್ಲಿ ದ್ವೇಷ ಭಾಷಣಗಳನ್ನು ಮಾಡಿದ್ದ ಆರೋಪಗಳಲ್ಲಿ ಅಂದ್ರಾಬಿ ತಿಹಾರ ಜೈಲಿನಲ್ಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News