×
Ad

ಪುತ್ತೂರು ದಲಿತ ವಿದ್ಯಾರ್ಥಿಗಳ ಅತ್ಯಾಚಾರ ಘಟನೆ: ದ.ಕ. ಜಿಲ್ಲಾ ಡಿ.ಸಿ., ಎಸ್ಪಿ ಅಮಾನತಿಗೆ ಜಯನ್ ಮಲ್ಪೆಆಗ್ರಹ

Update: 2019-07-10 21:31 IST

ಉಡುಪಿ, ಜು.10: ಕೇವಲ ಒಂದೇ ತಿಂಗಳಲ್ಲಿ ದಲಿತ ವಿದ್ಯಾರ್ಥಿಗಳ ಮೂರು ಅತ್ಯಾಚಾರ ಪ್ರಕರಣಗಳು ನಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರನ್ನು ತಕ್ಷಣ ಅಮಾನತು ಮಾಡುವಂತೆ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಆಗ್ರಹಿಸಿದ್ದಾರೆ.

 ಬುಧವಾರ ಉಡುಪಿ ಅಜ್ಜರಕಾಡಿನಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಉಡುಪಿಯ ಅಂಬೇಡ್ಕರ್ ಯುವಸೇನೆ ಪುತ್ತೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತಿದ್ದರು.

ಇವತ್ತು ಕೋಮುವಾದಿ ಸಂಘ ಪರಿವಾರ ಮಹಿಳೆಯರನ್ನು ಯಾವ ದೃಷ್ಟಿ ಯಲ್ಲಿ ನೋಡಿತ್ತಿದೆ ಎಂಬುದಕ್ಕೆ ಮನುಸ್ಮತಿಯ ವಾಕ್ಯಗಳನ್ನು ಉದ್ಧರಿಸುವ ಅಗತ್ಯವಿಲ್ಲ. ತಮ್ಮದೇ ಅಕ್ಕ,ತಂಗಿಯರನ್ನು ಮರ್ಯಾದಾ ಹತ್ಯೆ ಮಾಡುವ ಇವರ ಬತ್ತಳಿಕೆಯಲ್ಲಿ ದಲಿತ ವಿದ್ಯಾರ್ಥಿಗಳ ಅತ್ಯಾಚಾರ ಸೇರಿಕೊಳ್ಳತೊಡಗಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಮುಕರ, ಕೀಚಕರ ಜಿಲ್ಲೆ ಎಂದು ಘೋಷಿಸ ಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಪ್ರಗತಿಪರ ಚಿಂತಕ ನಾಗೇಶ್ ಉದ್ಯಾವರ ಮಾತನಾಡಿ, ಸಂಸ್ಕೃತಿ ಬಗ್ಗೆ ಮಾತನಾಡುವವರು ದಲಿತ ವಿದ್ಯಾರ್ಥಿಗಳ ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಈ ಘಟನೆ ಇಡೀ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ವೆರೋನಿಕ ಕರ್ನೇಲಿಯೊ,ಮರಾಠಿ ಸಂಘದ ನಾಯಕ ಅನಂತ ನಾಯ್ಕ, ದಸಂಸದ ಮಂಜುನಾಥ ಗಿಳಿಯಾರು, ವಾಸುದೇವ ಮುದ್ದೂರು ಮಾತನಾಡಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಸುಂದರ್ ಕಪ್ಪೆಟ್ಟು, ಗಣೇಶ್ ನೆರ್ಗಿ, ಗುಣವಂತ ತೊಟ್ಟಂ, ಕೆ.ಟಿ.ನಾಯ್ಕ, ಮಂಜುನಾಥ ಕಪ್ಪೆಟ್ಟು, ಲಕ್ಷ್ಮಣ ನಾಯ್ಕ, ಸಂತೋಷ್ ಕಪ್ಪಟ್ಟು, ಸುಕೇಶ್ ಪುತ್ತೂರು, ಪ್ರಸಾದ್ ನೆರ್ಗಿ, ಶಶಿಕಲಾ ತೊಟ್ಟಂ, ರಾಮೋಜಿ ಬಲರಾಮ ನಗರ, ಸಂತೋಷ್ ಗುಜ್ಜರಬೆಟ್ಟು ದಿನೇಶ್ ಮೂಡುಬೆಟ್ಟು, ಪ್ರಕಾಶ್ ಬ್ರಹ್ಮಾವರ ಹಾಗೂ ಭಗವಾನ್‌ದಾಸ್ ಮಲ್ಪೆಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News