ಹೆಜಮಾಡಿ ಬಂದರು ಯೋಜನೆ: ಕೇಂದ್ರ ಅನುದಾನ ಬಿಡುಗಡೆ

Update: 2019-07-10 16:43 GMT

ಪಡುಬಿದ್ರಿ: 128 ಕೋಟಿ ರೂ. ವೆಚ್ಚದ ಹೆಜಮಾಡಿ ಬಂದರು ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಶೇ.50:50 ಪಾಲು ನೀಡಲಿದೆ. ಆದರೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಮುಂದಡಿ ಇಟ್ಟಿಲ್ಲ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮ (ಎನ್‍ಎಫ್‍ಡಿಬಿ)ದ ಸದಸ್ಯ ಉಮೇಶ್ ಪೋಚಪ್ಪನ್ ಹೇಳಿದರು.

ಹೆಜಮಾಡಿ ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಅವರು ಮೀನುಗಾರರೊಂದಿಗೆ ಯೋಜನೆಯ ಬಗ್ಗೆ ಸಮಗ್ರ ವಿವರ ಪಡೆದು ಮಾತನಾಡಿದರು.

ಹೆಜಮಾಡಿ ಬಂದರು ಯೋಜನೆಗೆ ಕೇಂದ್ರ ಸರ್ಕಾರವು ಈಗಾಗಲೇ 13.5 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರದ ಪಾಲು ಇನ್ನೂ ಬಿಡುಗಡೆಯೂ ಆಗಿಲ್ಲ. ಈ ಬಗ್ಗೆ ಕೇಂದ್ರ ಮೀನುಗಾರಿಕಾ ಸಚಿವ ಗಿರಿರಾಜ್ ಸಿಂಗ್‍ರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸುವುದಾಗಿ ಉಮೇಶ್ ಭರವಸೆ ನೀಡಿದರು.

ಕೇಂದ್ರ ಶೇ. 75 ಪಾಲಿ ನೀಡಲಿ: ಬಂದರು ಯೋಜನೆಗೆ ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಶೆ. 75:25 ಇತ್ತು. ಆದರೆ ಈಗ ಅದು 50:50 ಕ್ಕೆ ಸೀಮಿತಗೊಂಡಿದೆ. ಇದರಿಂದ ರಾಜ್ಯದ ಪಾಲು ಪಡೆಯಲು ಕಷ್ಟಕರವಾಗಿದೆ. ಹಿಂದಿನಂತೆಯೇ ಕೇಂದ್ರ ಸರ್ಕಾರವು ಶೇ. 75 ಅಂಶ ನೀಡಬೇಕು. ಈ ಬಗ್ಗೆ ಕೇಂದ್ರ ಮೀನುಗಾರಿಕಾ ಸಚಿವಾಲಯಕ್ಕೆ ಮನವರಿಕೆ ಮಾಡಬೇಕೆಂದು ಬಿಜೆಪಿ ಮೀನುಗಾರರ ದಕ ಜಿಲ್ಲಾ ಸಂಚಾಲಕ ಶೋಭೇಂದ್ರ ಸಸಿಹಿತ್ಲುರ ವಿನಂತಿಸಿದರು. 

ಕರಾವಳಿ ಕಾವಲು ಪೋಲಿಸ್ ಪಡೆಗೆ ರಾಜ್ಯದ ಕರಾವಳಿಯಾದ್ಯಂತ ಮೀನುಗಾರ ಯುವಕರನ್ನು ತಾತ್ಕಾಲಿಕ ನೆಲೆಯಲ್ಲಿ ನಿಯೋಜನೆಗೊಳಿಸಲಾಗಿದೆ. ಅವರಿಗೆ ಉದ್ಯೋಗ ಖಾತ್ರಿ ಮತ್ತು ಜೀವನ ಭದ್ರತೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಶೋಭೇಂದ್ರ ಸಸಿಹಿತ್ಲು ಆಗ್ರಹಿಸಿದರು. 

ಸಾಂಪ್ರದಾಯಿಕ ಮೀನುಗಾರರು ಮತ್ತು ಆದಿವಾಸಿ ಮೀನುಗಾರರನ್ನು ಗುರುತಿಸಿ ಅವರಿಗೆ ಹೆಚ್ಚು ಪ್ರೋತ್ಸಾಹ ನೀಡುವ ಯೋಜನೆ ತಕ್ಷಣ ಜಾರಿಗೊಳ್ಳಲಿದೆ. ಅವರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಬದ್ಧವಾಗಿದೆ. ಮೀನುಗಾರರಿಗೆ ವಿಶೇಷ

ತರಬೇತಿ: ಕೇಂದ್ರ ಸರ್ಕಾರವು  ಮೀನುಗಾರಿಕಾ ವಲಯಕ್ಕೆ ಹಲವಾರು ದೂರಗಾಮೀ ಯೋಜನೆಗಳನ್ನು ಜಾರಿಗೆ ತರಲಿದೆ. ಪ್ರತಿ ಗ್ರಾಮದಲ್ಲಿ ಸೇವಾ ಮನೋಭಾವದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಗುರುತಿಸಿ ಅವರಿಗೆ ಮೀನುಗಾರಿಕೆಯ ಬಗ್ಗೆ ವಿಶೇಷ ತರಬೇತಿ ನೀಡಲು ಯೋಜನೆ ಸಿದ್ಧಗೊಂಡಿದೆ ಎಂದರು.

ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹೆಜಮಾಡಿ ಏಳೂರು ಮೊಗವೀರ ಮಹಾಸಭಾ ಅಧ್ಯಕ್ಷ ಸದಾಶಿವ ಕೋಟ್ಯಾನ್, ಗ್ರಾಪಂ ಸದಸ್ಯ ಶೈಲೇಶ್ ಕುಮಾರ್, ಪಾಂಡುರಂಗ ಕರ್ಕೇರ, ಶರಣ್ ಕುಮಾರ್ ಮಟ್ಟು, ಅಶೋಕ್ ಮಂಗಳೂರು, ಶಶಾಂಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News