ಮುಷ್ಕರ ನಡೆಸಿದರೆ ಸೂಕ್ತ ಕ್ರಮ: ಕಮಿಷನರ್ ಸಂದೀಪ್ ಪಾಟೀಲ್ ಸೂಚನೆ

Update: 2019-07-10 16:52 GMT
ಸಂದೀಪ್ ಪಾಟೀಲ್ 

ಮಂಗಳೂರು, ಜು.10: ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘವು ಜು.11ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿರುವುದು ಗಮನಕ್ಕೆ ಬಂದಿದೆ. ಒಂದು ವೇಳೆ ಸಂಘಟನೆ ಮುಷ್ಕರ ನಡೆಸಿದ್ದೇ ಆದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೂಚನೆ ನೀಡಿದ್ದಾರೆ.

ರಾಜ್ಯದ ಉಚ್ಚ ನ್ಯಾಯಾಲಯವು ಶಾಲಾ ಮಕ್ಕಳನ್ನು ಸಾಗಿಸುವಂತಹ ವಾಹನಗಳಲ್ಲಿ ಮಿತಿಗಿಂತ ಜಾಸ್ತಿ ಮಕ್ಕಳನ್ನು ಹಾಕದಂತೆ ನಿಗಾವಹಿಸಬೇಕೆಂದು ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶ ಮೀರಿ ಮುಷ್ಕರ ನಡೆಸುವಂತಿಲ್ಲ. ಸೂಚನೆಗೂ ಜಗ್ಗದೇ ಮುಷ್ಕರಕ್ಕೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀಗಣೇಶ್ ಹಾಗೂ ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಉಚ್ಚ ನ್ಯಾಯಾಲಯದ ಆದೇಶದ ಮಾಹಿತಿಯನ್ನು ಸಂಘಟನೆಯ ಪ್ರಮುಖರಿಗೆ ನೀಡಲಾಗಿದೆ. ಜತೆಗೆ ನೋಟಿಸ್ ಕೂಡ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಸಂಘಟಕರು ಉಚ್ಚ ನ್ಯಾಯಾಲಯದ ಕಾನೂನು ಮತ್ತು ನಿರ್ದೇಶನಗಳನ್ನು ಅನುಸರಿಸಬೇಕು. ಜತೆಗೆ, ಶಾಲಾ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಮುಷ್ಕರದಿಂದ ಶಾಲಾ ಮಕ್ಕಳಿಗೆ ತೊಂದರೆಯಾಗಲಿದೆ. ಕೂಡಲೇ ಮುಷ್ಕರ ವಾಪಸ್ ಪಡೆಯಲು ಖಡಕ್ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News