ಹೆಣ್ಣು ಮಕ್ಕಳು ಜಾಗರೂಕರಾಗಿರಿ, ಯಾರನ್ನೂ ಹೆಚ್ಚು ನಂಬಬೇಡಿ: ಡಿವೈಎಸ್‍ಪಿ ದಿನಕರ ಶೆಟ್ಟಿ

Update: 2019-07-10 17:17 GMT

ಪುತ್ತೂರು: ಹೆಣ್ಣು ಮಕ್ಕಳು ಹೆಚ್ಚು ಜಾಗರೂಕರಾಗಿರಬೇಕಾದ ಪರಿಸ್ಥಿತಿ ಪ್ರಸ್ತುತ ಕಾಲಘಟ್ಟದಲ್ಲಿದ್ದು, ಯಾರನ್ನೂ ಪೂರ್ಣವಾಗಿ ನಂಬಬೇಡಿ. ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದಲ್ಲಿ ಮೋಸಗಳಾಗುವ ಸಂಭವವಿದೆ ಎಂದು ಪುತ್ತೂರು ಡಿವೈಎಸ್‍ಪಿ ದಿನಕರ ಶೆಟ್ಟಿ ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡಿದರು.

ಅವರು ಬುಧವಾರ ಪುತ್ತೂರು ಬ್ರಹ್ಮಶ್ರೀ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜ್‍ನ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.

ಅವರು ಹೆಣ್ಣು ಮಕ್ಕಳು ಎಲ್ಲಿಯಾದರೂ ಹೊರಗಡೆ ಹೋಗುವಾಗ ಮೈ ಎಲ್ಲಾ ಕಣ್ಣಾಗಿರಬೇಕು. ಏಕೆಂದರೆ ತಮ್ಮ ಜೊತೆಗಿರು ವವರೇ ನಮಗೆ ಮೋಸ ಮಾಡುತ್ತಾರೆ. ಅಲ್ಲದೇ ಪ್ರತಿಯೊಂದು ಹೆಜ್ಜೆಯನ್ನು ಇಡುವಾಗಲೂ ತುಂಬಾ ಯೋಚನೆ ಮಾಡಿ ಇಡಬೇಕಾಗಿದೆ. ಏನಾದರೂ ಮಹಿಳೆಯರಿಗೆ ಕಿರುಕುಳವಾದರೆ ತಕ್ಷಣವೇ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ. ಅದರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಧೈರ್ಯ ತುಂಬಿದರು.

ದ.ಕ. ಜಿಲ್ಲಾದ್ಯಂತವೂ ಗಾಂಜಾದಂತಹ ಅಮಲು, ನಶೆಯ ಪದಾರ್ಥಗಳು ಮಾರಾಟವಾಗುತ್ತಿದೆ. ಇಂತಹ ಪದಾರ್ಥಗಳು ವ್ಯಸನೆ ಮಾಡುವಂತಹ ವ್ಯಕ್ತಿಗಳ ಮಾಹಿತಿ ನೀಡಿ ಅಥವಾ ಅಪರಾಧ ನಡೆಯುವಂತಹ ಸ್ಥಳವನ್ನು ಕರೆ ಮಾಡಿ ತಿಳಿಸಿ ತಮ್ಮ ಕುರಿತು ಯಾವುದೇ ಮಾಹಿತಿ ಕೇಳದೆ ಕೇವಲ ಅಪರಾಧದ ಮಾಹಿತಿಯನ್ನು ತಿಳಿದು ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು ಮೊಬೈಲ್ ಬಂದ ಮೇಲೆ ಖಾಸಗಿಯ ಮಾತುಗಳು ನಿಂತು ಹೋಗಿವೆ. ಏಕೆಂದರೆ ಮೊಬೈಲ್‍ಲ್ಲಿ ಮಾತಾನಾಡುವುದು ಬೇರೆಂದು ಕಡೆ ದಾಖಲಾಗುತ್ತದೆ. ಅಲ್ಲದೇ ನಮ್ಮ ಮೆಸೇಜ್ ಕೂಡಾ ಬೇರೊಂದು ಕಡೆ ದಾಖಲಾಗುತ್ತದೆ. ಆದ್ದರಿಂದ ತಮ್ಮ ಖಾಸಗಿತನ ವನ್ನು ಮೊಬೈಲ್‍ಗಳಲ್ಲಿ ಹಂಚದೇ ನೇರವಾಗಿ ಮಾತನಾಡಿ ಎಂದರು.

ವಿದ್ಯಾರ್ಥಿಗಳು ಕಾಲೇಜ್‍ಗೆ ಹೋಗುವಾಗ ಮೊಬೈಲ್ ಫೋನ್‍ಗಳನ್ನು ಅಂಗಡಿಯಲ್ಲಿ ಇಡಬೇಡಿ. ಅಲ್ಲದೇ ಪರಿಚಯದ ವ್ಯಕ್ತಿಗಳಲ್ಲಿಯೂ ಕೊಡಬೇಡಿ. ಒಂದು ವೇಳೆ ಮೊಬೈಲ್‍ನ್ನು ಯಾರಿಗಾದರೂ ನೀಡಿದರೆ ಅದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ನಾವು ಎಲ್ಲಾ ಕಡೆ ತನಿಖೆ ಮಾಡುತ್ತಿದ್ದೇವೆ. ಇದು ಯಾರಿಗೂ ತೊಂದರೆಯನ್ನುಂಟು ಮಾಡಲು ಅಲ್ಲ, ಬದಲಾಗಿ ಸಮಸ್ಯೆಯನ್ನು ದೂರಮಾಡುವುದಕ್ಕಾಗಿ. ಸಾಮಾಜಿಕ ಜಾಲತಾಣದಲ್ಲಿ ಅಥವಾ ಮಾಧ್ಯಮಗಳಲ್ಲಿ ಬರುವ ಮಾಹಿತಿಯನ್ನು ಒಳ್ಳೆಯದಕ್ಕೂ ಹಾಗೂ ಕೆಟ್ಟದಕ್ಕೂ ಬಳಸಲಾಗುತ್ತದೆ. ಆದರೆ ನಾವು ಅದನ್ನು ಒಳ್ಳೆಯ ಮಾಹಿತಿಯನ್ನು ತೆಗೆದು, ಕೆಟ್ಟದನ್ನು ಅಲ್ಲೇ ಬಿಡಬೇಕು ಎಂದರು.

ವೇದಿಕೆಯಲ್ಲಿ ಪುತ್ತೂರು ಮಹಿಳಾ ಠಾಣಾ ಎಸ್‍ಐ ಸೇಸಮ್ಮ, ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜ್‍ನ ಪ್ರಾಂಶುಪಾಲ ಪ್ರೊ. ಝೇವಿಯರ್ ಡಿಸೋಜಾ ಹಾಗೂ ಕಾಲೇಜ್‍ನ ಉಪನ್ಯಾಸಕರು ಉಪಸ್ಥಿತರಿದ್ದರು.

ಉಪನ್ಯಾಸಕ ಸ್ಟೀವನ್ ಕ್ವಾಡ್ರಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News