ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಿದ ವಿತ್ತ ಸಚಿವಾಲಯ: ಎಡಿಟರ್ಸ್ ಗಿಲ್ಡ್ ಖಂಡನೆ

Update: 2019-07-10 18:09 GMT

ಹೊಸದಿಲ್ಲಿ, ಜು.10: ಕೇಂದ್ರ ಸಚಿವಾಲಯದ ನಾರ್ತ್ ಬ್ಲಾಕ್‌ ನಲ್ಲಿರುವ ವಿತ್ತ ಸಚಿವಾಲಯಕ್ಕೆ ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಿದ ಕ್ರಮವನ್ನು ಎಡಿಟರ್ಸ್ ಗಿಲ್ಡ್ ಖಂಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ‘ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ (ಭಾರತದ ಸಂಪಾದಕರ ಸಂಘ), ಸರಕಾರದ ಮಾನ್ಯತೆ ಪಡೆದಿರುವ ಪತ್ರಕರ್ತರಿಗೂ ಪೂರ್ವಾನುಮತಿಯಿಲ್ಲದೆ ಪ್ರವೇಶ ನಿರಾಕರಿಸಿದ ವಿತ್ತ ಸಚಿವಾಲಯದ ಸ್ವೇಚ್ಛಾಚಾರದ ನಿರ್ಧಾರ ಖಂಡನೀಯವಾಗಿದೆ. ಪತ್ರಕರ್ತರು ವಿತ್ತ ಸಚಿವಾಲಯ ಪ್ರವೇಶಿಸುವಾಗ ಸಂಯಮ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬ ವಿಷಯವನ್ನು ಸಂಪಾದಕರ ಸಂಘ ಒಪ್ಪುತ್ತದೆ. ಪತ್ರಕರ್ತರು ಸರಕಾರಿ ಕಚೇರಿಗಳಲ್ಲಿ ತಮಗೆಂದು ನಿಯೋಜಿತವಾಗಿರುವ ರೂಂನಲ್ಲಿ ಆತಿಥ್ಯ ಸ್ವೀಕರಿಸಲೆಂದು ಸರಕಾರಿ ಕಚೇರಿಗೆ ತೆರಳುವುದಲ್ಲ, ಅವರು ಸುದ್ದಿ ಸಂಗ್ರಹಿಸುವ ಸವಾಲಿನ ಕರ್ತವ್ಯ ನಿರ್ವಹಿಸಲು ತೆರಳುತ್ತಾರೆ. ಸಚಿವಾಲಯದ ಈ ಆದೇಶ ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಮತ್ತು ಇದರಿಂದ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಮತ್ತಷ್ಟು ಕೆಳಗಿನ ರ್ಯಾಂಕ್‌ಗೆ ಕುಸಿಯಬಹುದು ಎಂದು ತಿಳಿಸಿದೆ.

ಪತ್ರಕರ್ತರು ಸರಕಾರಿ ಕಚೇರಿ ಪ್ರವೇಶಿಸುವುದರಿಂದ ತೊಂದರೆಯಾಗುತ್ತಿದೆ ಎಂದು ವಿತ್ತ ಸಚಿವಾಲಯ ಭಾವಿಸುವುದಾದರೆ, ಪತ್ರಕರ್ತರೊಂದಿಗೆ ಚರ್ಚಿಸಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬಹುದು. ಆದ್ದರಿಂದ ನಿರ್ಧಾರವನ್ನು ಮರುಪರಿಶೀಲಿಸಿ ಆದೇಶವನ್ನು ಹಿಂಪಡೆಯುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರಲ್ಲಿ ಮನವಿ ಮಾಡುವುದಾಗಿ ಸಂಪಾದಕರ ಸಂಘದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News