×
Ad

ವ್ಯಾಪಾರ ಬಿಕ್ಕಟ್ಟು: ಅಮೆರಿಕ, ಚೀನಾ ಮಾತುಕತೆ ಪುನರಾರಂಭ

Update: 2019-07-10 23:32 IST

ವಾಶಿಂಗ್ಟನ್, ಜು. 10: ವ್ಯಾಪಾರ ಬಿಕ್ಕಟ್ಟಿಗೆ ಸಂಬಂಧಿಸಿದ ಮಾತುಕತೆಯನ್ನು ಮುಂದುವರಿಸುವುದಾಗಿ ಅಮೆರಿಕ ಮತ್ತು ಚೀನಾಗಳು ಘೋಷಿಸಿದ ಒಂದು ವಾರದ ಬಳಿಕ, ಉಭಯ ದೇಶಗಳ ಸಂಧಾನಕಾರರು ಮಂಗಳವಾರ ಫೋನ್ ಮೂಲಕ ಮಾತುಕತೆಗಳನ್ನು ನಡೆಸಿದ್ದಾರೆ.

ಚೀನಾವು ತನ್ನ ಬದ್ಧತೆಗಳಿಂದ ಹಿಂದೆ ಸರಿಯುತ್ತಿದೆ ಎಂಬುದಾಗಿ ಅಮೆರಿಕ ಆರೋಪಿಸಿದ ಬಳಿಕ, ಅವುಗಳ ನಡುವಿನ ಮಾತುಕತೆ ಮೇ ತಿಂಗಳಲ್ಲಿ ಮುರಿದು ಬಿದ್ದಿತ್ತು ಹಾಗೂ ಉಭಯ ದೇಶಗಳು ಪರಸ್ಪರರ ದೇಶಗಳ ವಸ್ತುಗಳ ಮೇಲಿನ ಆಮದು ತೆರಿಗೆಯನ್ನು ಹೆಚ್ಚಿಸುವ ಮೂಲಕ ವಿವಾದವು ಉಲ್ಬಣಗೊಂಡಿತ್ತು.ಆದರೆ, ಜೂನ್ 29ರಂದು ಜಪಾನ್‌ನಲ್ಲಿ ನಡೆದ ಜಿ20 ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಭೇಟಿಯಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಮಾತುಕತೆಗಳನ್ನು ಮುಂದುವರಿಸಲು ನಿರ್ಧರಿಸಿದ್ದರು.ಮಂಗಳವಾರ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ಮತ್ತು ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈತೀಝರ್ ಚೀನಾದ ಉಪ ಪ್ರಧಾನಿ ಲಿಯು ಹೆ ಮತ್ತು ವಾಣಿಜ್ಯ ಸಚಿವ ರೊಂಗ್ ಶಾನ್ ಜೊತೆ ಮಾತುಕತೆ ನಡೆಸಿದರು.ಮಾತುಕತೆ ಸುಗಮವಾಗಿ ನಡೆಯಿತು, ಆದರೆ, ಹೆಚ್ಚಿನ ವಿವರಗಳನ್ನು ನೀಡಲು ಇನ್ನೂ ಸಮಯ ಬಂದಿಲ್ಲ ಎಂದು ಶ್ವೇತಭವನದ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೊವ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News