ಸೌದಿ ರಾಜಕುಮಾರಿಗೆ 6 ತಿಂಗಳ ಜೈಲು ಶಿಕ್ಷೆಗೆ ಮನವಿ
ಪ್ಯಾರಿಸ್, ಜು. 10: ಸೌದಿ ಅರೇಬಿಯ ದೊರೆ ಸಲ್ಮಾನ್ ಪುತ್ರಿಗೆ ಆರು ತಿಂಗಳ ಜೈಲು ಶಿಕ್ಷೆ ನೀಡುವಂತೆ ತಾವು ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಫ್ರಾನ್ಸ್ ಪ್ರಾಸಿಕ್ಯೂಟರ್‌ಗಳು ಮಂಗಳವಾರ ಹೇಳಿದ್ದಾರೆ.
ರಾಜಕುಮಾರಿ ಹಸ್ಸಾ ಬಿಂತ್ ಸಲ್ಮಾನ್ ಪ್ಯಾರಿಸ್‌ನಲ್ಲಿರುವ ತನ್ನ ಫ್ಲಾಟ್‌ನಲ್ಲಿ ಕೆಲಸಗಾರರೊಬ್ಬರಿಗೆ ಹೊಡೆದ ಪ್ರಕರಣದ ವಿಚಾರಣೆ ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿದೆ. 2016 ಸೆಪ್ಟಂಬರ್‌ನಲ್ಲಿ ತನ್ನ ಫ್ಲಾಟ್‌ನಲ್ಲಿ ದುರಸ್ತಿ ಕಾರ್ಯ ನಡೆಸುತ್ತಿದ್ದ ಈಜಿಪ್ಟ್‌ನ ಕೆಲಸಗಾರನ ಮೇಲೆ ಆಯುಧದಿಂದ ಹಲ್ಲೆ ಮಾಡಿದ ಹಾಗೂ ಅಪಹರಣಗೈದ ಆರೋಪ ರಾಜಕುಮಾರಿ ಮೇಲಿದೆ. ರಾಜಕುಮಾರಿಯ ಅಂಗರಕ್ಷಕನು ತನ್ನ ಕೈಗಳನ್ನು ಕಟ್ಟಿ ಮುಷ್ಟಿಯಿಂದ ಹೊಡೆದನು ಹಾಗೂ ತುಳಿದನು ಹಾಗು ರಾಜಕುಮಾರಿಯ ಪಾದಗಳಿಗೆ ಚುಂಬಿಸುವಂತೆ ಬಲವಂತಪಡಿಸಿದನು ಎಂಬುದಾಗಿ ಕೆಲಸಗಾರ ಅಶ್ರಫ್ ಈದ್ ಪೊಲೀಸರಿಗೆ ದೂರು ನೀಡಿದ್ದರು.
ಕೆಲಸಗಾರನು ತನ್ನ ಮೊಬೈಲ್ ಫೋನ್‌ನಲ್ಲಿ ನನ್ನ ಚಿತ್ರ ತೆಗೆಯುತ್ತಿದ್ದನು ಎಂಬುದಾಗಿ ರಾಜಕುಮಾರಿ ಆರೋಪಿಸಿದ್ದಾರೆ.