ಶಿಕ್ಷಕರ ವರ್ಗಾವಣೆಗೆ ವಿರೋಧ: ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ

Update: 2019-07-11 11:09 GMT

ಪುತ್ತೂರು: ನಗರದ ಕೊಂಬೆಟ್ಟು ಸರ್ಕಾರಿ  ಪದವಿ ಪೂರ್ವ ಕಾಲೇಜ್‍ನ ಪ್ರೌಢಶಾಲಾ ವಿಭಾಗದ 8 ಶಿಕ್ಷಕರನ್ನು ವರ್ಗಾವಣೆಗೊಳಿಸಿರುವುದನ್ನು ವಿರೋಧಿಸಿ, ವರ್ಗಾವಣೆಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ಗುರುವಾರ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಪಡ್ಡಂಬೈಲು ಸುರೇಶ್ ಶೆಟ್ಟಿ ಅವರು ಸರ್ಕಾರದ ನಿಯಮಾವಳಿಯಂತೆ 650 ವಿದ್ಯಾರ್ಥಿಗಳಿರುವ ಕೊಂಬೆಟ್ಟು ಪ್ರೌಢಶಾಲೆಯಲಿ ಮುಖ್ಯ ಶಿಕ್ಷಕರು, ಚಿತ್ರಕಲಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊರತು ಪಡಿಸಿ 20 ಶಿಕ್ಷಕರು ಇರಬೇಕು. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 6 ಶಿಕ್ಷಕರನ್ನು ವರ್ಗಾವಣೆಗೊಳಿಸಿರುವುದರಿಂದ ಇದಿಗ ಕೇವಲ 13 ಶಿಕ್ಷಕರು ಮಾತ್ರ ಇದ್ದಾರೆ. ಶೈಕ್ಷಣಿಕ ಗುಣಮಟ್ಟ ಮತ್ತು ಚಟುವಟಿಕೆಗಳಿಗೆ ಇದು ಮಾರಕವಾಗಿದೆ. ನಮಗೆ ನ್ಯಾಯ ದೊರಕುವ ತನಕ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.

ಶಾಲಾ ಎಸ್‍ಡಿಎಂಸಿ ಕಾರ್ಯಾಧ್ಯಕ್ಷರಾದ ಸ್ಥಳೀಯ ವಾರ್ಡ್‍ನ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಮಾತನಾಡಿ ಕೊಂಬೆಟ್ಟು ಶಾಲೆಗೆ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲು ಅದ್ಯಾಪಕರು ನಡೆಸಿ ಅಭಿಯಾನದ ಪರಿಣಾಮವಾಗಿ ಇಲ್ಲಿ ವಿದ್ಯಾರ್ಥಿಗಳ ಕೊರತೆಯಾಗಿಲ್ಲ. ಆದರೆ ಇದೀಗ ಶಿಕ್ಷಕರ ಕೊರತೆಯಾಗಿದೆ. ಶಾಸಕರ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಭೇಟಿ ಮಾಡಿ ಈ ಕುರಿತು ಮನವರಿಕೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಓರ್ವ ಶಿಕ್ಷಕರನ್ನು ಉಳಿಸಿಕೊಳ್ಳುವುದರೊಂದಿಗೆ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಗೊಳಿಸುವ ಭರವಸೆ ನೀಡಿದ್ದರು. ಆದರೆ ಈ ತನಕ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಪೋಷಕರಾದ ಥೋಮಸ್, ವಿದ್ಯಾರ್ಥಿಗಳಾದ ಶಿವಾನಿ, ಸಂಶೀರಾ ಮಾತನಾಡಿದರು.

ಪ್ರೌಢಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಶಾಲೆಯ ಬಳಿಯಿಂದ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿದರು. ಪ್ರತಿಭಟನಾ ಸಭೆಯ ಬಳಿಕ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News