ಯೂಟ್ಯೂಬ್‌ನಲ್ಲಿ ರಾಜ್ಯ ಮುಕ್ತ ವಿವಿಯ ಉಪನ್ಯಾಸ ವಿಡಿಯೋ: ಡಾ.ವಿದ್ಯಾಶಂಕರ್

Update: 2019-07-11 12:33 GMT

ಉಡುಪಿ, ಜು.11: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೂ ಟ್ಯೂಬ್‌ನಲ್ಲಿಯೂ ಎಲ್ಲ ವಿಭಾಗದ ಪಠ್ಯಗಳ ಉಪನ್ಯಾಸ ನೀಡುವ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಿದೆ ಎಂದು ವಿವಿಯ ಕುಲಪತಿ ಡಾ.ವಿದ್ಯಾಶಂಕರ್ ಎಸ್. ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದ ಎಲ್ಲ 176 ತಾಲೂಕು ಕೇಂದ್ರ ಗಳಲ್ಲಿಯೂ ಲರ್ನರ್ ಸಪೋರ್ಟ್ ಸೆಂಟರನ್ನು ಸ್ಥಾಪಿಸಲಾಗುವುದು. ಪ್ರತಿ ಮನೆ ಮನೆಗೂ ವಿವಿ ತಲುಪುವಂತೆ ಯೋಜನೆ ರೂಪಿಸಲಾಗಿದೆ. ತಿಂಗಳಿಗೊಮ್ಮೆ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರಾದೇಶಿಕ ನಿರ್ದೇಶಕರು ಮತ್ತು ಸಂಬಂಧಿತ ವಿದ್ಯಾರ್ಥಿಗಳ ಜೊತೆ ವಿಡಿಯೋ ಕಾನ್ಫೆರೆನ್ಸ್ ನಡೆಸಲು ಉದ್ದೇಶಿಸಲಾಗಿದೆ ಎಂದರು.

ರಾಜ್ಯದಲ್ಲಿರುವ ತನ್ನ ಎಲ್ಲ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರತ್ಯೇಕ ಮಹಿಳಾ ಸಂಪರ್ಕ ಕೇಂದ್ರ ಮತ್ತು ಗ್ರಂಥಾಲಯ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಸರಕಾರಿ ಇಲಾಖೆಗಳ ಮುಖ್ಯಸ್ಥರ ಮೂಲಕ ಉನ್ನತ ಅಧ್ಯಯನಕ್ಕೆ ಸುತ್ತೋಲೆ ಹೊರಡಿಸುವ ಯೋಜನೆ ಕೈಗೊಳ್ಳಲಾಗಿದೆ. ಕೌಶಾಲ್ಯಾಭಿವೃದ್ಧಿಗೆ ಪ್ರತ್ಯೇಕ ವಿಭಾಗ ರಚನೆ ಮಾಡಿ, ರಾಜ್ಯದ ಎಲ್ಲ ಕಡೆಗಳಲ್ಲಿ ಕೌಶಾಲ್ಯಾಭಿವೃದ್ಧಿ ತರಬೇತಿ ಶಿಬಿರ ಗಳನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ಕೇಂದ್ರ ಪರೀಕ್ಷಾ ವಿಭಾಗದಲ್ಲಿ ಪ್ರತಿ ವಿಭಾಗಕ್ಕೂ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗುವುದು. ಆನ್‌ಲೈನ್ ಮತ್ತು ಆಫ್‌ಲೈನ್ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ. ವಿವಿಯ ಶುಲ್ಕಗಳನ್ನು ವಿದ್ಯಾರ್ಥಿ ಇರುವಲ್ಲಿಯೇ ಪಾವತಿಸಲು ಆನ್‌ಲೈನ್ ಸೌಲಭ್ಯ ಜಾರಿಗೆ ತರಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕುಲಪತಿಗಳು ವಾರದಲ್ಲಿ ಒಂದು ದಿವಸ ಪರೀಕ್ಷಾ ವಿಭಾಗದ ಕಡತಗಳನ್ನು ವಿಲೇವಾರಿ ಹಾಗೂ ವಿದ್ಯಾರ್ಥಿಗಳ ಮನವಿ ಪರಾಮರ್ಶಿಸುವ ನೂತನ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿವಿಯ ಉಡುಪಿ ಪ್ರಾದೇಶಿಕ ನಿರ್ದೇಶಕ ಡಾ.ಕೆ.ಪಿ. ಮಹಾಲಿಂಗಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News