​ಸಾಲಿಗ್ರಾಮ: ಕಸಗಳನ್ನು ಮೂಲದಲ್ಲಿಯೇ ವಿಂಗಡಿಸಲು ಸೂಚನೆ

Update: 2019-07-11 12:35 GMT

 ಉಡುಪಿ, ಜು.11: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪ್ರತೀ ನಾಗರಿಕರು ಘನ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿಕಸ, ಒಣಕಸ, ಅಪಾಯಕಾರಿ ಕಸವನ್ನಾಗಿ ಬೇರ್ಪಡಿಸಿ, ಹಸಿಕಸವನ್ನು ತಮ್ಮ ತಮ್ಮ ಸ್ವಂತ ಸ್ಥಳದಲ್ಲಿ ಪೈಪ್ ಕಾಂಪೋಸ್ಟ್, ಪಿಟ್‌ಕಾಂಪೋಸ್ಟ್ ಮೂಲಕ ವಿಲೇವಾರಿಗೊಳಿಸುವಂತೆ ಹಾಗೂ ಒಣಕಸವನ್ನು ಸಂಗ್ರಹಿಸಿ ಪ್ರತಿ 15 ದಿನಕ್ಕೊಮ್ಮೆ ಪಟ್ಟಣ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ಾಹನಕ್ಕೆ ನೀಡುವಂತೆ ತಿಳಿಸಲಾಗಿದೆ.

ಡೈಪರ್ಸ್, ಸ್ಯಾನಿಟರಿ ಪ್ಯಾಡ್ ಇತ್ಯಾದಿಗಳನ್ನು ಪೇಪರ್‌ನಲ್ಲಿ ಸುತ್ತಿ ಪ್ರತ್ಯೇಕ ವಾಗಿ ನೀಡಬೇಕು. ಅಪಾಯಕಾರಿ ವಸ್ತುಗಳು, ಎಲೆಕ್ಟ್ರಾನಿಕ್ ಸಾಮಾನುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನೀಡುವುದು ಕಡ್ಡಾಯವಾಗಿದ್ದು, ಈ ಎಲ್ಲ ಕಸಗಳನ್ನು ಮಿಶ್ರ ಮಾಡಿ ನೀಡಿದರೆ ಅದನ್ನು ಮೊದಲನೇ ಬಾರಿ ಸ್ವೀಕರಿಸಲಾಗುವುದಿಲ್ಲ, ಎರಡನೇ ಬಾರಿ ಘನ ತ್ಯಾಜ್ಯ ವಿಲೇವಾರಿ ಉಪನಿಯಮಗಳು 2016ರಂತೆ ದಂಡ ವಿಧಿಸಲಾಗುವುದು.

ನಾಗರಿಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ ಪಟ್ಟಣ ಪಂಚಾಯತ್ ನೊಂದಿಗೆ ಕೈ ಜೋಡಿಸಲು ಕೋರಲಾಗಿದೆ. ಮೇಲಿನ ಎಲ್ಲಾ ನಿಯಮಗಳು ಪಾಲನೆಯಾಗುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಲು ಪ್ರತಿಯೊಂದು ವಾರ್ಡ್‌ಗೂ ನೋಡೆಲ್ ಅಧಿಕಾರಿ ಹಾಗೂ ಪೌರಕಾರ್ಮಿಕರನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. ನಾಗರಿಕರು ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿ ಸಿದಂತೆ ನೀಡುವ ಯಾವುದೇ ದೂರು ಹಾಗೂ ಸಮಸ್ಯೆಗಳನ್ನು ಸಮಿತಿಯವರು ಪರಿಶೀಲಿಸಿ ಆರೋಗ್ಯ ನಿರೀಕ್ಷಕರ ಗಮನಕ್ಕೆ ತರುವಂತೆ ಸೂಚಿಸಲಾಗಿದೆ.

ಹಸಿಕಸವನ್ನು ಪೈಪ್‌ಕಾಂಪೋಸ್ಟ್ ಮೂಲಕ ಸಮರ್ಪಕವಾಗಿ ನಿರ್ವಹಿಸಲು ಇಚ್ಛಿಸುವವರು ಪಟ್ಟಣ ಪಂಚಾಯತ್ ಕಚೇರಿಯಿಂದ ಉಚಿತವಾಗಿ ಪೈಪ್ ಪಡೆಯಲು ಕಚೇರಿಯ ಆರೋಗ್ಯ ವಿಭಾಗದಲ್ಲಿ ಹೆಸರು ನೋಂದಾವಣಿ ಮಾಡಲು ತಿಳಿಸಲಾಗಿದೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಸಹಕರಿಸಲು ವಿನಂತಿಸಲಾಗಿದೆ. ಯಾರಾದರೂ ಕಸವನ್ನು ಎಸೆಯುವುದು ಕಂಡುಬಂದಲ್ಲಿ ತಕ್ಷಣವೇ ತಮ್ಮ ವಾರ್ಡ್ ಸಮಿತಿ ಗಮನಕ್ಕೆ ತರುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News