ಅಡ್ಯಾರು-ಕಣ್ಣೂರು ಬಳಿ ಪೈಪ್‌ಲೈನ್ ದುರಸ್ತಿ ಪೂರ್ಣ: ನೀರು ಪೂರೈಕೆಗೆ ಪಂಪಿಂಗ್ ಆರಂಭ

Update: 2019-07-11 13:40 GMT

ಮಂಗಳೂರು, ಜು.11: ತುಂಬೆ ಕಿಂಡಿ ಅಣೆಕಟ್ಟಿನಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ಪೈಪ್‌ಲೈನ್ ಅಡ್ಯಾರು- ಕಣ್ಣೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ಒಡೆದು ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ನಗರದಲ್ಲಿ ನೀರು ಪೂರೈಕೆ ಆರಂಭವಾಗಲಿದೆ.

ತುಂಬೆಯಿಂದ ಪಡೀಲ್ ಪಂಪ್‌ಹೌಸ್‌ಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯಲ್ಲಿ ಅಡ್ಯಾರ್‌ನ ಮಾತಾ ನರ್ಸರಿಯ ಮುಂಭಾಗದಲ್ಲಿ ರವಿವಾರ ರಾತ್ರಿ ನೀರು ಸೋರಿಕೆ ಆರಂಭವಾದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಆರಂಭಿಸಲಾಗಿತ್ತು. ಮಳೆಯಿಂದಾಗಿ ದುರಸ್ತಿ ಕಾರ್ಯ ವಿಳಂಬವಾಗಿದ್ದು, ಇದೀಗ ದುರಸ್ತಿ ಪೂರ್ಣಗೊಂಡಿದೆ.

ಪಂಪ್‌ಹೌಸ್‌ನಲ್ಲಿ ಪಂಪಿಂಗ್ ಕಾರ್ಯ ಆರಂಭಗೊಂಡಿದ್ದು, ನಾಳೆ ಮುಂಜಾನೆಯ ವೇಳೆ ನಗರದ ವಿವಿಧ ಕಡೆ ನೀರು ಪೂರೈಕೆಯಾಗಲಿದೆ ಎಂದು ಮನಪಾ ಕಾರ್ಯ ನಿರ್ವಾಹಕ ಇಂಜಿನಿಯರ್ ಲಿಂಗೇಗೌಡ ಅಡ್ಯಾರು ಕಣ್ಣೂರಿನ ಪಂಪ್‌ಹೌಸ್‌ನ ಮುಖ್ಯ ಪೈಪ್‌ಲೈನ್ ಜಾಯಿಂಟ್‌ನಲ್ಲಿ ಬಿರುಕಿನಿಂದ ನೀರು ಸೋರಿಕೆಯಾಗುತ್ತಿದ್ದು, ಪೈಪ್‌ಲೈನ್ ಮೇಲಿನ ಮಣ್ಣು ತೆರವು ಗೊಳಿಸಿ ದುರಸ್ತಿ ಕಾರ್ಯ ಸೋಮವಾರ ಆರಂಭಗೊಂಡಿತ್ತು. ಆದರೆ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ತುಂಬುವ ಕಾರಣ ಪೈಪ್‌ಲೈನ್ ಜಾಯಿಂಟ್ ಸರಿಪಡಿಸಲು ವಿಳಂಬವಾಗಿತ್ತು.

ಇದರಿಂದಾಗಿ ಕಳೆದ ಸೋಮವಾರದಿಂದ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜನರು ತೊಂದರೆ ಅನುಭವಿಸುವಂತಾಗಿತ್ತು. ಕೆಲವೆಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ನಡೆಸಲಾಯಿತಾದರೂ, ಹಲವು ಪ್ರದೇಶಗಳಲ್ಲಿ ಜನರು ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ಪರದಾಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News