ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಮುಷ್ಕರ: ವಿದ್ಯಾರ್ಥಿಗಳ ಪರದಾಟ

Update: 2019-07-11 15:08 GMT

ಮಂಗಳೂರು, ಜು.11: ಕಾನೂನು ರಕ್ಷಣೆ ಹೆಸರಿನಲ್ಲಿ ಬಡಪಾಯಿ ಶಾಲಾ ಮಕ್ಕಳ ವಾಹನ ಚಾಲಕರ ಮೇಲೆ ಪೊಲೀಸರು ವಿನಾಕಾರಣ ಕೇಸು ದಾಖಲಿಸುತ್ತಾರೆ ಎಂದು ಆರೋಪಿಸಿ ದ.ಕ. ಜಿಲ್ಲೆಯಾದ್ಯಂತ ಶಾಲಾ ವಾಹನ ಮಾಲಕರು ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದಾರೆ. ಪರಿಣಾಮ ಶಾಲಾ ವಾಹನಗಳಲ್ಲಿ ತೆರಳುವ ಮಕ್ಕಳು ಪರದಾಡುವಂತಾಯಿತು.

ಈ ಸಂದರ್ಭ ಶಾಲಾ ಮಕ್ಕಳು ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಅವಲಂಬಿಸಬೇಕಾಯಿತು. ಇದೇ ವೇಳೆ ಸಾರಿಗೆ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಮಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮುಷ್ಕರ ಯಶಸ್ವಿ: ಕಾನೂನು ರಕ್ಷಣೆಯ ಹೆಸರಿನಲ್ಲಿ ಬಡಪಾಯಿ ಶಾಲಾ ಮಕ್ಕಳ ವಾಹನ ಚಾಲಕರ ಮೇಲೆ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿ ಗುರುವಾರದಿಂದ ಆರಂಭವಾದ ಅನಿರ್ದಿಷ್ಟಾವಧಿ ಮುಷ್ಕರವು ದ.ಕ. ಜಿಲ್ಲೆಯಾದ್ಯಂತ ಯಶಸ್ವಿಯಾಗಿದೆ ಎಂದು ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ಲೇಡಿಹಿಲ್ ತಿಳಿಸಿದ್ದಾರೆ.

ನಿರಂತರ ಕೇಸ್ ಹಾಗೂ ವಿಪರೀತ ದಂಡ ಸೇರಿದಂತೆ ವಿವಿಧ ರೀತಿಯ ಕಿರುಕುಳವನ್ನು ಕಳೆದ ಒಂದು ತಿಂಗಳಿನಿಂದ ಅನುಭವಿಸುತ್ತಿದ್ದ ಶಾಲಾ ಮಕ್ಕಳ ವಾಹನ ಚಾಲಕರು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ಅಹವಾಲನ್ನು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲಾ ಮಕ್ಕಳ ವಾಹನ ಸಂಚಾರ ಬಂದ್ ಮಾಡುವ ಮೂಲಕ ಮುಷ್ಕರ ವನ್ನು ನಡೆಸಲು ತೀರ್ಮಾನಿಸಿತ್ತು. ಅದು ಇಂದು ಯಶಸ್ವಿಯೂ ಆಗಿದೆ ಎಂದರು.

ಈಗಾಗಲೇ ಮುಷ್ಕರಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಮಕ್ಕಳ ಪೋಷಕರು, ಸಾರ್ವಜನಿಕರು, ವಿವಿಧ ಕಾರ್ಮಿಕ ಸಂಘಟನೆಗಳು, ಮಧ್ಯಮ ವರ್ಗದ ಸಂಘಟನೆಗಳು, ಅಟೋರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು, ಓಲಾ ಉಬರ್ ಚಾಲಕರು ಸೇರಿದಂತೆ ವಿವಿಧ ವಿಭಾಗದ ಚಾಲಕರು ಬೆಂಬಲ ಘೋಷಿಸಿದ್ದಾರೆ ಎಂದರು.

‘ನ್ಯಾಯಾಲಯಗಳ ತೀರ್ಪು, ಕಾನೂನುಗಳ ಪಾಲನೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.ಕಾನೂನುಗಳು ಇರುವುದು ಜನಸಾಮಾನ್ಯರ ಬದುಕಿಗೆ ಪೂರಕವಾಗಿಯೇ ಹೊರತು, ಜನರ ಬದುಕನ್ನು ನಾಶ ಮಾಡುವುದಕ್ಕಲ್ಲ. ಇಂತಹ ಸಂದರ್ಭ ಕಾನೂನು ರಕ್ಷಣೆ ನೆಪದಲ್ಲಿ ಬಡಪಾಯಿಗಳ ಮೇಲೆ ದಾಳಿ ಸರಿಯಲ್ಲ. ಶಾಲಾ ಮಕ್ಕಳ ವಾಹನ ಚಾಲಕರು ನ್ಯಾಯಯುತ ಹೋರಾಟದಲ್ಲಿದ್ದು, ಜಿಲ್ಲೆಯ ಸರ್ವ ವಿಭಾಗದ ಜನತೆ ಬೆಂಬಲಿಸಬೇಕು’ ಎಂದು ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News