ಕುಂದಾಪುರ: ಮನೆ ಮೇಲೆ ಗುಡ್ಡ ಕುಸಿತ, ಬಾವಿ ಕುಸಿತ, ತೋಟಕ್ಕೆ ಹಾನಿ; ತೋಡಿಗೆ ಬಿದ್ದು ಓರ್ವ ಮೃತ್ಯು

Update: 2019-07-11 16:27 GMT

ಉಡುಪಿ, ಜು.11: ಒಂದು ತಿಂಗಳ ಕಣ್ಣಮುಚ್ಚಾಲೆಯ ಬಳಿಕ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದ ಉಡುಪಿ ಜಿಲ್ಲೆಯಾದ್ಯಂತ ಮನೆ, ಸೊತ್ತು, ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಗಳು ವರದಿಯಾಗುತ್ತಿವೆ.

ಕಳೆದ ರಾತ್ರಿ ಸುರಿದ ಸುರಿದ ಮಳೆಗೆ ಕಾವ್ರಾಡಿ ಗ್ರಾಮದಲ್ಲಿ ಗುಡ್ಡಕುಸಿದು ಮನೆಯೊಂದಕ್ಕೆ ಭಾರೀ ಪ್ರಮಾಣದ ಹಾನಿ ಸಂಭವಿಸಿದ್ದರೆ, ಇಂದು ಅಪರಾಹ್ನ ಹಾರ್ದಳ್ಳಿ ಮಂಡಳ್ಳಿಯಲ್ಲಿ ಬಾವಿಯೊಂದು ಕುಸಿದು ಹೋಗಿದೆ. ಯಡಾಡಿ ಮತ್ಯಾಡಿ ಗ್ರಾಮದಲ್ಲಿ ಬೀಸಿದ ಸುಂಟರಗಾಳಿಗೆ ತೋಟವೊಂದರಲ್ಲಿದ್ದ 100ಕ್ಕೂ ಅಧಿಕ ಅಡಿಕೆ ಹಾಗೂ ತೆಂಗಿನ ಮರಗಳು ಉರುಳಿ ಬಿದ್ದಿವೆ ಎಂದು ವರದಿಗಳು ತಿಳಿಸಿವೆ.

ಕಾವ್ರಾಡಿ ಗ್ರಾಮದ ಅಬ್ದುಲ್ಲಾ ಎಂಬವರ ಮನೆಯ ಮೇಲೆ ಬುಧವಾರ ರಾತ್ರಿ 9:15ರ ಸುಮಾರಿಗೆ ಭಾರೀ ಮಳೆಯಿಂದ ಮನೆಯ ಪಕ್ಕದ ಗುಡ್ಡ ಕುಸಿದು ಬಿದ್ದಿದ್ದು, ವಾಸ್ತವ್ಯ ಮನೆ ಭಾಗಶ: ಹಾನಿಗೊಂಡಿದೆ. ಇದರಿಂದ ಸುಮಾರು ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಕುಂದಾಪುರ ತಾಲೂಕು ಕಚೇರಿಗೆ ಮಾಹಿತಿ ಬಂದಿದೆ. ಮನೆಯಲ್ಲಿದ್ದ ಯಾರಿಗೂ ಗಾಯವಾದ ಬಗ್ಗೆ ವರದಿಯಾಗಿಲ್ಲ.

ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಭಾಸ್ಕರ ಪೂಜಾರಿ ಎಂಬವರ ಮನೆಯ ಬಾವಿ ಇಂದು ಅಪರಾಹ್ನ 12 ಗಂಟೆ ಸುಮಾರಿಗೆ ಹಠಾತ್ತನೆ ಕುಸಿದುಹೋಗಿದೆ. ಇದರಿಂದ 1.60 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.

ತೋಟಕ್ಕೆ ಹಾನಿ: ಬುಧವಾದ ಬೀಸಿದ ಬಿರುಗಾಳಿಗೆ ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿ ಗ್ರಾಮದ ಸಿರಿಮಠ ಎಂಬಲ್ಲಿ ಸರೋಜಿನಿ ಎನ್.ಶೆಟ್ಟಿ ಅವರ ತೋಟದಲ್ಲಿದ್ದ ಸುಮಾರು 100 ಅಡಿಕೆ ಮರ, ಎಂಟು ತೆಂಗಿನ ಮರ ಗಳಲ್ಲದೇ ಮಾವು, ಚಿಕ್ಕು, ಸಾಗುವಾನಿ ಹಾಗೂ ಹಲಸಿನ ಮರಗಳು ಧರೆಗೆ ಉರುಳಿದ್ದು, ಇದರಿಂದ ಸುಮಾರು ಎರಡು ಲಕ್ಷ ರೂ.ಗಳ ನಷ್ಟದ ಆಂದಾಜು ಮಾಡಲಾಗಿದೆ.

ಅಲ್ಲದೇ ಅದೇ ಗ್ರಾಮದ ಶಂಕರ ಶೆಟ್ಟಿ ಎಂಬವರ ತೋಟದ ಅಡಿಕೆ ಹಾಗೂ ತೆಂಗಿನ ಮರಗಳೂ ಗಾಳಿಗೆ ಧರಾಶಾಯಿಯಾಗಿದ್ದು 53,000ರೂ.ನಷ್ಟದ ಅಂದಾಜು ಮಾಡಲಾಗಿದೆ. ಸ್ಥಳಕ್ಕೆ ಯಡಾಡಿ-ಮತ್ಯಾಡಿ ಗ್ರಾಮ ಲೆಕ್ಕಾಧಿಕಾರಿ ಆನಂದ, ಕುಂದಾಪುರ ತೋಟಗಾರಿಕಾ ಇಲಾಖೆ ಸಿಬ್ಬಂದಿ ಮಧುಕರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.

9 ಲಕ್ಷ ರೂ.ಗಳಿಗೂ ಅಧಿಕ ಹಾನಿ: ಕಳೆದೆರಡು ದಿನಗಳ ಮಳೆಯಿಂದ ಜಿಲ್ಲೆಯ ನಾನಾ ಭಾಗಗಳಲ್ಲಿ ಅಂದಾಜು 9 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಸೊತ್ತುಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿಗಳು ಬಂದಿವೆ.

ಬೈಂದೂರು: ಪಡುವರಿ ಗ್ರಾಮದ ಬೆಸ್ಕುರೆ ಬಳಿ ಕಳೆದ ರಾತ್ರಿಯ ಗಾಳಿ-ಮಳೆಗೆ ಗೋವಿಂದ ಎಂಬವರ ಮನೆಯ ಹೆಂಚು-ತಗಡು ಶೀಟು ಹಾರಿಹೋಗಿ 25,000, ಅಬ್ಬಕ್ಕ ಅವರ ಮನೆಯ ಹೆಂಚು-ತಗಡು ಶೀಟ್ ಹಾರಿಹೋಗಿ 50,000ರೂ., ನಾಗರಾಜ ಎಂಬವರ ಮನೆಗೆ ಸಂಪೂರ್ಣ ಹಾನಿಯಾಗಿ 70,000, ಎಡ್ತರೆ ಗ್ರಾಮದ ಪ್ರಕಾಶ್ ಮೊಗವೀರ ಎಂಬವರ ಮನೆಗೆ ಒಂದು ಲಕ್ಷ ರೂ. ಉಪ್ಪುಂದ ಗ್ರಾಮದ ಇಂದಿರಾವತಿ ಆಚಾರ್ತಿ ಅವರ ವಾಸದ ಮನೆಯ ಮೇಲ್ಚಾವಣಿ ಹಾರಿಹೋಗಿ 25,000 ರೂ., ಹಳ್ಳಿಹೊಳೆ ಗ್ರಾಮದ ರಾಮ ಹಸಲರ ಮನೆಯ ಮೇಲೆ ಮರ ಬಿದ್ದು 15,000 ರೂ. ಹಾಗೂ ಕಂಬದಕೋಣೆ ಗ್ರಾಮದ ಅಳಿಗೇರಿಯ ಹಾಜಿರಾಬಿ ಅವರ ಮನೆಯ ಪಾಗಾರ ಕುಸಿದು 8,000ರೂ.ನಷ್ಟ ಸಂಭವಿಸಿದೆ.

ಹಡವು ಗ್ರಾಮದ ಹೆಬ್ಬಾರುಗಾಗಿಲು ಎಂಬಲ್ಲಿ ವನಮಾಲಾರ ಮನೆಯ ಮೇಲ್ಚಾವಣಿ ಗಾಳಿಗೆ ಹಾರಿಹೋಗಿ 15,000ರೂ.,ನಾವುಂದ ಗ್ರಾಮದ ಚೆನ್ನಿಬೆಟ್ಟು ಎಂಬಲ್ಲಿ ನಾಗಮ್ಮ ಮೊಗವೀರ ಅವರ ದನದ ಕೊಟ್ಟಿಗೆಗೆ ಹಾನಿಯಾಗಿ 12,000ರೂ., ಕಿರಿಮಂಜೇಶ್ವರ ಗ್ರಾಮದ ನಾಗುರು ಎಂಬಲ್ಲಿ ಸುರೇಖ ಅವರ ಅಂಗಡಿ ಮೇಲೆ ತೆಂಗಿನ ಮರಬಿದ್ದು 30,000ರೂ. ಕಾಲುತೋಡು ಗ್ರಾಮದ ಕಮಲ ಶೆಟ್ಟಿ ಅವರ ದನದ ಕೊಟ್ಟಿಗೆಗೆ ಗಾಳಿಯಿಂದ 10,000ರೂ. ಹಾಗೂ ಜಡ್ಕಲ್ ಗ್ರಾಮದ ಕರುಣಾಕರನ್ ಮನೆಗೆ 10,000 ರೂ. ನಷ್ಟ ಸಂಭವಿಸಿದೆ.

ಉಡುಪಿ: ತಾಲೂಕಿನ ಮೂಡುತೋನ್ಸೆ ಗ್ರಾಮದ ಸಂತೋಷ ಶೆಟ್ಟಿ ಎಂಬವರ ವಾಸದ ಮನೆಯ ಹಿಂಭಾಗದ ಗೋಡೆ ಕುಸಿದು 25,000ರೂ., ಪುತ್ತೂರು ಗ್ರಾಮದ ಅಶೋಕ ಶೆಟ್ಟಿ ಅವರ ಮನೆಯ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು, 50,000ರೂ. ನಷ್ಟದ ಅಂದಾಜು ಮಾಡಲಾಗಿದೆ. ಕಡೆಕಾರು ಗ್ರಾಮದ ಉಮೇಶ ಸಾಲಿಯಾನ್ ಮನೆಗೆ 3,000ರೂ.ನಷ್ಟವಾಗಿದೆ.

ಬ್ರಹ್ಮಾವರ: ಬುಧವಾರ ರಾತ್ರಿ ತಾಲೂಕಿನ ಕೋಟತಟ್ಟು ಗ್ರಾಮದ ಗೋವಿಂದ ಮರಕಾಲರ ಮನೆಯ ಹೆಂಚು ಹಾಗೂ ಸಿಮೆಂಟ್ ಶೀಟುಗಳು ಗಾಳಿಗೆ ಹಾರಿಹೋಗಿ 10,000ರೂ., ಅದೇ ಗ್ರಾಮದ ನಾಗು ಮರಕಾಲ್ತಿ ಅವರ ಮನೆಯ ಮೇಲೆ ಮರಬಿದ್ದು 15,000ರೂ. ನಷ್ಟವಾಗಿದೆ ಎಂದು ತಾಲೂಕು ಕಚೇರಿಯಿಂದ ತಿಳಿದುಬಂದಿದೆ.

ಕುಂದಾಪುರ: ಗಾಳಿ-ಮಳೆಯಿಂದ ತಾಲೂಕಿನ ಬೇಳೂರು ಗ್ರಾಮದ ಕಲಾವತಿ ಶೆಡ್ತಿ ಅವರ ಮನೆಗೆ 25,000ರೂ., ಹೆಂಗವಳ್ಳಿ ಗ್ರಾಮದ ಚಿಕ್ಕ ಅವರ ಮನೆಗೆ 10ಸಾವಿರ, ಯಡಾಡಿ ಮತ್ಯಾಡಿ ಗ್ರಾಮದ ಸರೋಜಿನಿ ಮನೆಗೆ 15,000ರೂ., ವಡೇರಹೋಬಳಿ ಗ್ರಾಮದ ರಾಜು ಪೂಜಾರಿ ಮನೆಗೆ 18,000ರೂ., ರಾಮಕೃಷ್ಣರ ಮನೆಗೆ 50,000 ರೂ., ಅಕ್ಕಮ್ಮರ ಮನೆಯ ಜಾನುವಾರು ಹಟ್ಟಿಗೆ 50,000ರೂ., ಕುಂದಾಪುರ ಗ್ರಾಮದ ಗಿರಿಜರ ಮನೆಗೆ 25,000ರೂ. ನಷ್ಟವಾಗಿರುವ ಬಗ್ಗೆ ಮಾಹಿತಿ ಕುಂದಾಪುರ ತಾಲೂಕು ಕಚೇರಿಗೆ ಬಂದಿದೆ.

ಕೆರಾಡಿ ಗ್ರಾಮದ ಬಚ್ಚ ಭಂಡಾರಿ ಮನೆಗೆ 15ಸಾವಿರ, ಕೆಂಚನೂರು ಗ್ರಾಮದ ಗಿರಿಜಾರ ಮನೆಗೆ 10ಸಾವಿರ, ಕಾವ್ರಾಡಿ ಗ್ರಾಮದ ಸರೋಜ ಮನೆಗೆ 25,000ರೂ., ಹೊಂಬಾಡಿ-ಮಂಡಾಡಿ ಗ್ರಾಮದ ಮಂಜು ಮನೆಗೆ 20 ಸಾವಿರ, ಗುಜ್ಜಾಡಿ ಗ್ರಾಮದ ಲಕ್ಷ್ಮೀಯವರ ಮನೆಗೆ 40,000ರೂ., ಹಳ್ನಾಡು ಗ್ರಾಮದ ಪದ್ದು ಮನೆಗೆ 30,000ರೂ., ಹೊಸೂರು ಗ್ರಾಮದ ಸರೋಜ ಶೆಟ್ಟಿ ಮನೆಗೆ 7,000ರೂ., ಶಂಕರ ಶೆಟ್ಟಿ ಮನೆಗೆ 9,000ರೂ., ವನಜ ಮನೆಗೆ 14ಸಾವಿರ ರೂ., ಸಿಂಗಾರಿ ಮನೆಗೆ 6ಸಾವಿರ, ಸೀತಾ ಎಂಬವರ ಮನೆಗೆ 6,000ರೂ. ಹಾಗೂ ನಾಗಯ್ಯ ಶೆಟ್ಟಿ ಮನೆಗೆ 18,000ರೂ. ನಷ್ಟದ ವರದಿ ಬಂದಿದೆ.

ತೋಡಿಗೆ ಬಿದ್ದು ಮೃತಪಟ್ಟ ರೈತ

ಈ ನಡುವೆ ಹಕ್ಲಾಡಿ ಗ್ರಾಮದ ಗಂಗೆಮನೆಯ ಯೋಗೇಂದ್ರ ಮೊಗವೀರ (32) ಎಂಬವರು ನಿನ್ನೆ ಸುರಿದ ಭಾರೀ ಮಳೆಗೆ ಮನೆಯ ತೋಟದ ಪಕ್ಕದ ತೋಡಿಗೆ ಅಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಹಾಲಿಂಗ ಮೊಗವೀರ ಎಂಬವರ ಮಗನಾದ ಯೋಗೇಂದ್ರ ನಿನ್ನೆ ಅಪರಾಹ್ನ ಎರಡು ಗಂಟೆಗೆ ತಮ್ಮ ತೋಟದಲ್ಲಿ ಕೆಲಸಕ್ಕೆಂದು ತೆರಳಿದ್ದು ಸಂಜೆಯಾದರೂ ಹಿಂದಿರುಗಿ ಬಂದಿರಲಿಲ್ಲ. ಹುಡುಕಾಡಿದಾಗ ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ತೋಟದ ಪಕ್ಕದಲ್ಲೇ ತೋಡಿನಲ್ಲಿ ಮೃತದೇಹ ಪತ್ತೆಯಾಯಿತು.

ನಿನ್ನೆ ಭಾರೀ ಮಳೆಯಿಂದ ತೋಡಿನಲ್ಲಿ ನೆರೆ ಬಂದಿದ್ದು, ತೋಡಿಗೆ ನಿರ್ಮಿಸಿದ್ದ ಕಾಲುಸಂಕವನ್ನು ದಾಟುವ ಸಂದರ್ಭದಲ್ಲಿ ಅವರು ಅಕಸ್ಮಿಕವಾಗಿ ಕಾಲುಜಾರಿ ತೋಡಿಗೆ ಬಿದ್ದು, ನೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ಹೇಳಲಾ ಗಿದೆ.

ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News