ಯೆನೆಪೊಯ ವೈದ್ಯಕೀಯ ಕಾಲೇಜಿನಲ್ಲಿ ಹೃದಯ ಶಸ್ತ್ರಚಿಕಿತ್ಸೆ ಆರಂಭ

Update: 2019-07-11 15:25 GMT

ಮಂಗಳೂರು, ಜು.11: ಸಮೀಪದ ದೇರಳಕಟ್ಟೆಯ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯು ಸಕಲ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಪ್ರಾರಂಭವಾಗಿದೆ.

ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಸರುವಾಸಿಯಾದ ಮಂಗಳೂರಿನ ಪ್ರಖ್ಯಾತ ವೈದ್ಯರ ತಂಡ ಹಾಗೂ ಪರ್ಫೂಷನಿಸ್ಟ್, ಇಂಟೆನ್ಸಿವಿಸ್ಟ್, ಫಿಸಿಯೋಥೆರಪಿಸ್ಟ್ ಮತ್ತು ಉತ್ತಮ ತರಬೇತಿ ಪಡೆದ ಹೃದಯ ತೀವ್ರ ನಿಗಾ ದಾದಿಯರನ್ನು ಒಳಗೊಂಡಿರುವ ಸದಸ್ಯರು ಈ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಖ್ಯಾತ ವೈದ್ಯರಾದ ಡಾ.ಶಕ್ತಿವೇಲು ಕುಮಾರೇಶನ್, ಡಾ.ಗಣೇಶ್ ಕಾಮತ್, ಡಾ. ಮೋಹನ್‌ದಾಸ್, ಡಾ.ಕೃಷ್ಣಪ್ರಸಾದ್, ಡಾ.ಗುರುನಂದನ್ ಮೊದಲಾದವರು ಲಭ್ಯವಿರುತ್ತಾರೆ. ಪ್ರಥಮ 4 ಗ್ರಾಫ್ಟ್‌ಗಳ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಜೂ.5ರಂದು 65 ವರ್ಷದ ಪುರುಷನಿಗೆ ಮಾಡಲಾಯಿತು. 5ನೇ ದಿನದಂದು ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ನಗರದ ಕೊಡಿಯಾಲ್‌ಬೈಲ್‌ನ ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗಳು ಒಂದು ದಶಕಕ್ಕೂ ಹೆಚ್ಚು ಕಾಲ ನಡೆಯುತ್ತಿದ್ದು, ಅಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಅಭಿಮಾನವನ್ನು ಗಳಿಸಿದೆ. ಆರಂಭದಿಂದ ಈ ತನಕ ಆಸ್ಪತ್ರೆಯು ಶೇ.99ನಷ್ಟು ಯಶಸ್ಸಿನ ಪ್ರಮಾಣವನ್ನು ಕಾಯ್ದುಕೊಳ್ಳಲು ಸಮರ್ಥವಾಗಿದೆ.

ದೇರಳಕಟ್ಟೆಯ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಯಸ್ಕರ ಮತ್ತು ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ (ಕವಾಟದ ದುರಸ್ತಿ ಸೇರಿದಂತೆ ಮಿನಿಮಲ್ ಇನ್‌ವೇಸಿವ್ ಹೃದಯ ಶಸ್ತ್ರಚಿಕಿತ್ಸೆ) ಎಲ್ಲ ಪ್ರಮುಖ ಮಹಾಪಧಮನಿಯ ಶಸ್ತ್ರಚಿಕಿತ್ಸೆಗಳು (ಅನ್ಯೂರಿಸಮ್) ಎಂಡೋ ವ್ಯಾಸ್ಕುಲರ್ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ.

ಯಾವುದೇ ರೀತಿಯ ಕಾರ್ಡಿಯೋಥ್ರೊಸಿಕ್ ಶಸ್ತ್ರಚಿಕಿತ್ಸೆಗಳಿಗಾಗಿ ರೋಗಿಗಳು ಮಂಗಳೂರಿನಿಂದ ಬೇರೆ ಕಡೆಗೆ ಹೋಗದಿರುವ ಹಾಗೆ ಮೂಲ ಸೌಕರ್ಯಗಳು ಹಾಗೂ ನಿರ್ವಹಣೆಯ ತಂಡವನ್ನು ನಿರ್ಮಿಸುವುದು ಆಸ್ಪತ್ರೆಯ ಆಡಳಿತ ಮಂಡಳಿಯ ಮುಖ್ಯ ಉದ್ದೇಶವಾಗಿದೆ ಎಂದು ಯೆನೆಪೊಯ ವಿಶ್ವವಿದ್ಯಾನಿಲಯವು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News