ಉಡುಪಿ: ತಾಯಿ ಜೊತೆ ಮಲಗಿದ್ದ ಮಗುವಿನ ಅಪಹರಣ

Update: 2019-07-11 16:50 GMT

ಶಂಕರನಾರಾಯಣ, ಜು.11: ಮನೆಯೊಳಗೆ ತಾಯಿ ಜೊತೆ ಮಲಗಿದ್ದ ಹೆಣ್ಣು ಮಗುವೊಂದನ್ನು ಮುಸುಕುಧಾರಿ ಅಪರಿಚಿತ ಅಪಹರಿಸಿರುವ ಘಟನೆ ಯಡಮೊಗೆ ಗ್ರಾಮದ ಕುಮ್ಟಿಬೇರು ಎಂಬಲ್ಲಿ ಇಂದು ಬೆಳಗಿನ ಜಾವ 4:30ರ ಸುಮಾರಿಗೆ ನಡೆದಿದೆ.

ಅಪಹರಣಗೊಂಡ ಮಗುವನ್ನು ಕುಮ್ಟಿಬೇರು ನಿವಾಸಿ ಸಂತೋಷ್ ನಾಯ್ಕ ಹಾಗೂ ರೇಖಾ ದಂಪತಿಯ 1 ವರ್ಷ 3 ತಿಂಗಳ ಮಗಳು ಸಾನ್ವಿಕಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ರೇಖಾ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

ಜು.10ರಂದು ರಾತ್ರಿ ಸಂತೋಷ್ ನಾಯ್ಕಿ ಹೊಸಂಗಡಿಯ ಸಂಡೂರಿನ ಪವರ್ ಹೌಸ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ರಾತ್ರಿ ಪಾಳಿಯ ಕೆಲಸಕ್ಕೆ ತೆರಳಿದ್ದು, ಸಂತೋಷ್ ತಾಯಿ ತನ್ನ ಮಗಳ ಮನೆಗೆ ನಾಟಿ ಕೆಲಸಕ್ಕೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ರೇಖಾ ತನ್ನ ಐದು ವರ್ಷದ ಗಂಡು ಮಗು ಮತ್ತು ಸಾನ್ವಿಕಾ ಜೊತೆ ಮನೆಯಲ್ಲಿ ಮಲಗಿದ್ದರೆನ್ನಲಾಗಿದೆ.

ಬೆಳಗಿನ ಜಾವ ಮನೆಯ ಹಿಂಬಾಗಿಲನ್ನು ದೂಡಿ ಒಳಗೆ ಬಂದ ಮುಸುಕುಧಾರಿ ಅಪರಿಚಿತ ವ್ಯಕ್ತಿ, ರೇಖಾ ಜೊತೆ ಮಲಗಿದ್ದ ಸಾನ್ವಿಕಾ ಹೆಣ್ಣು ಮಗುವನ್ನು ಎತ್ತಿಕೊಂಡು ಅಪಹರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಗುವಿನ ಅಳು ಮತ್ತು ಬಾಗಿಲಿನ ಶಬ್ದ ಕೇಳಿ ಎಚ್ಚರಗೊಂಡ ರೇಖಾ ತನ್ನ ಇನ್ನೊಂದು ಮಗುವನ್ನು ಎತ್ತಿಕೊಂಡು ಅಪಹರಣಕಾರನ ಹಿಂದೆ ಓಡಿದ್ದಾರೆ.

ಈ ಸಂದರ್ಭ ಅಪಹರಣಕಾರ ಮಗುವನ್ನು ಹಿಡಿದುಕೊಂಡು ಮನೆ ಸಮೀಪದಲ್ಲಿರುವ ಕುಬ್ಜಾ ನದಿಯನ್ನು ದಾಟಿದ್ದಾನೆ. ಆದರೆ ಆತನ ಹಿಂದೆ ನದಿಗೆ ಇಳಿದ ರೇಖಾ ಹಾಗೂ ಗಂಡು ಮಗು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಇವರ ಬೊಬ್ಬೆ ಕೇಳಿ ಸ್ಥಳೀಯರು ಬಂದು ತಾಯಿ ಮಗನನ್ನು ರಕ್ಷಿಸಿದ್ದಾರೆ ಎಂದು ರೇಖಾ ಪೊಲೀಸರ ಜೊತೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಪರಿಶೀಲನೆ ನಡೆಸಿದ್ದಾರೆ. ಅದೇ ರೀತಿ ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ಶಂಕರನಾರಾಯಣ ಠಾಣಾಧಿಕಾರಿ ಪ್ರಕಾಶ್, ಕುಂದಾಪುರ ಠಾಣಾಧಿಕಾರಿ ಹರೀಶ್ ನಾಯ್ಕಿ ಆಗಮಿಸಿ ತನಿಖೆ ನಡೆಸಿದ್ದಾರೆ. ಶ್ವಾನದಳ, ಅಗ್ನಿಶಾಮಕದಳ ದವರು ಬಂದು ಹುಡುಕಾಟ ನಡೆಸಿದ್ದಾರೆ.

ಅಪಹರಣದ ವೇಳೆ ಮಗು ಬೂದು ಬಣ್ಣದ ಅಂಗಿ ಧರಿಸಿದ್ದು, ಮಗುವಿನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಉಡುಪಿ ಪೊಲೀಸ್ ಕಂಟ್ರೋಲ್ ರೂಮ್(0820-2526709), ಕುಂದಾಪುರ ಉಪವಿಭಾಗ ಪೊಲೀಸ್ ಉಪಾ ಧೀಕ್ಷಕ(9480805422), ಶಂಕರನಾರಾಯಣ ಪೊಲೀಸ್ ಉಪನಿರೀಕ್ಷಕ (9480805456)ರಿಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ.

ತನಿಖೆಗಾಗಿ ವಿಶೇಷ ತಂಡ ರಚನೆ

ಮಗುವಿನ ಪತ್ತೆಗಾಗಿ ಕುಂದಾಪುರ ಉಪಾಧೀಕ್ಷಕ ಬಿ.ಪಿ.ದಿನೇಶ್ ಕುಮಾರ್ ನೇತೃತ್ವದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ, ಕುಂದಾಪುರ ಸಂಚಾರ, ಶಂಕರ ನಾರಾಯಣ ಹಾಗೂ ಕುಂದಾಪುರ ಠಾಣಾಧಿಕಾರಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ.

ಮಗು ಅಪಹರಣಕ್ಕೆ ಸಂಬಂಧಿಸಿ ತಾಯಿಯ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಈವರೆಗೆ ಈ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಇದೊಂದು ಗಂಭೀರ ಪ್ರಕರಣವಾಗಿದ್ದು, ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಈ ಕುರಿತು ಸಾರ್ವಜನಿಕರ ಸಹಕಾರ ಕೂಡ ಬೇಕಾಗಿದೆ. ಮಗುವಿನ ಪತ್ತೆಯಾದಲ್ಲಿ ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News